ಕರುನಾಡ ಕರ್ಣ, ಕನ್ನಡಿಗರ ನೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಜನುಮದನದ ಸಂಭ್ರಮದಲ್ಲಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಯುವನಟರುಗಳಲ್ಲಿ ಒಬ್ಬರಾಗಿರುವ ಇವರ ಮುಂದೆ ಸದ್ಯ ಹಲವು ಸಿನಿಮಾಗಳಿವೆ. ಅದರಲ್ಲಿ ಬಹುಪಾಲು ಬಿಡುಗಡೆಗೆ ಸಜ್ಜಾಗಿರುವ ಎರಡು ಸಿನಿಮಾಗಳು ಅಭಿಷೇಕ್ ಅಂಬರೀಷ್ ಅವರ ಜನ್ಮದಿನಕ್ಕೆ ಇನ್ನಷ್ಟು ರಂಗು ತುಂಬಿವೆ.

‘ಯಂಗ್ ರೆಬೆಲ್ ಸ್ಟಾರ್’ ಎಂದೇ ಖ್ಯಾತರಾಗಿರುವ ಅಭಿಷೇಕ್ ಅಂಬರೀಷ್ ಅವರ ಮುಂದಿನ ಸಿನಿಮಾ ‘ದುನಿಯಾ’, ‘ಟಗರು’ ಗಳಂತಹ ಹಲವು ಹಿಟ್ ಚಿತ್ರಗಳನ್ನು ಕನ್ನಡಕ್ಕೆ ನೀಡಿರುವ ಖ್ಯಾತ ನಿರ್ದೇಶಕರು ಸುಕ್ಕ ಸೂರಿ ಅವರ ಜೊತೆಗೆ. ‘ಬ್ಯಾಡ್ ಮ್ಯಾನೇರ್ಸ್’ ಎಂದು ಹೆಸರಿಟ್ಟಾಗಿದೆ. ಬಹುಪಾಲು ಚಿತ್ರೀಕರಣ ಮುಗಿದಿರುವ ಈ ಸಿನಿಮಾಗೆ ಚರಣ್ ರಾಜ್ ಅವರ ಸಂಗೀತವಿದೆ. ರಚಿತ ರಾಮ್, ತಾರ ಮುಂತಾದ ಮೇರುನಟರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾದಿಂದ ಅಭಿಷೇಕ್ ಅವರ ಜನ್ಮದಿನಕ್ಕೆ ವಿಡಿಯೋ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ಜೊತೆಗೆ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಕೃಷ್ಣ ಅವರ ನಿರ್ದೇಶನದ ‘ಕಾಳಿ’ ಎಂಬ ಸಿನಿಮಾ ಕೂಡ ಅಭಿಷೇಕ್ ಅವರ ಸಾಲಿನಲ್ಲಿದೆ. ಹುಟ್ಟುಹಬ್ಬಕ್ಕೆ ಪೋಸ್ಟರ್ ಒಂದನ್ನಷ್ಟೇ ಬಿಟ್ಟುಕೊಟ್ಟಿರುವ ಈ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಿವೆ.

ಇದಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಘೋಷಿತವಾದ ‘ಅಯೋಗ್ಯ’ ಸಿನಿಮಾ ಖ್ಯಾತಿಯ ನಿರ್ದೇಶಕರಾದ ಎಸ್ ಮಹೇಶ್ ಕುಮಾರ್ ಅವರ ಜೊತೆಗಿನ ಅಭಿಷೇಕ್ ಅವರ ಮುಂದಿನ ಸಿನಿಮಾ ಘೋಷಣೆಯ ವಿಡಿಯೋ ಮೂಲಕ ಎಲ್ಲೆಡೆ ಸಂಚಲನ ಹುಟ್ಟಿಸಿತ್ತು. ಪೌರಾಣಿಕ ಪರಿಯ ವಿಡಿಯೋ ಮೂಲಕ ಎಲ್ಲರ ನಿರೀಕ್ಷೆಗೆ ಕಾರಣವಾಗಿರುವ ಈ ಚಿತ್ರ ಕೂಡ ಅಭಿಷೇಕ್ ಅಂಬರೀಷ್ ಅವರ ಸಿನಿಪಯಣಕ್ಕೆ ಹೊಸ ಮೈಲಿಗಲ್ಲಾಗುವ ಸಾಧ್ಯತೆಯಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ