ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ತುಂಬಾ ಬ್ಯುಸಿ. ತಮ್ಮ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’ ಬಿಡುಗಡೆಗೆ ಸಿದ್ದವಾಗಿರುವುದು ಒಂದು ಕಡೆಯಾದರೆ, ತಮ್ಮ ನಿರ್ದೇಶನದ ಎಲ್ಲಕಿಂತ ಹೆಚ್ಚು ಕಾತರಿಸುತ್ತಿರುವ ಚಿತ್ರ ‘ಯುಐ’ ಇನ್ನೊಂದೆಡೆ. ನಿರ್ದೇಶಕ ಉಪೇಂದ್ರ ಅವರಿಗೆ ಇರುವಂತಹ ಅಭಿಮಾನಿಗಳು ಅಸಂಖ್ಯ. ಬರೋಬ್ಬರಿ ಏಳು ವರ್ಷಗಳ ನಂತರ ಉಪೇಂದ್ರ ಅವರು ಮತ್ತೆ ನಿರ್ದೇಶನದ ಕುರ್ಚಿ ಏರಿದ್ದಾರೆ. ಸದ್ಯ ‘ಯುಐ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸಂತಸದಲ್ಲಿರುವ ಅಭಿಮಾನಿಗಳಿಗೆ ಉಪ್ಪಿ ಇನ್ನು ಒಂದು ಖುಷಿಪಡುವ ವಿಚಾರ ನೀಡಿದ್ದಾರೆ. ಬಾಲಿವುಡ್ ನ ಹೆಸರಾಂತ ನಟಿ, ಪಡ್ಡೆಹುಡುಗರ ಮನದರಸಿ ಸನ್ನಿ ಲಿಯೋನ್ ಅವರು ಉಪ್ಪಿ ಅವರ ‘ಯುಐ’ ಚಿತ್ರದಲ್ಲಿ ನಟಿಸಲಿದ್ದಾರಂತೆ.

ಇಲ್ಲಿವರೆಗೆ ಕನ್ನಡದಲ್ಲಿ ಕೇವಲ ಕೆಲವು ಹಾಡುಗಳಲ್ಲಷ್ಟೇ ಕಾಣಿಸಿಕೊಂಡಿರುವ ಸನ್ನಿ ಲಿಯೋನ ಅವರು ಎಲ್ಲೆಡೆ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಪ್ರೇಮ್ ಅವರ ಸಿನಿಮಾದ ಸೇಸಮ್ಮ ಹಾಡಿನಿಂದ ಕನ್ನಡಿಗರೆಲ್ಲರಿಗೂ ಪರಿಚಿತರಾದ ಸನ್ನಿ, ‘ಯುಐ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯ ಕೇಳಿಬರುತ್ತಿರುವ ಸುದ್ದಿಗಳ ಪ್ರಕಾರ, ಸನ್ನಿ ಲಿಯನ್ ಅವರ ಪಾತ್ರದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದ್ದು, ಅವರ ಭಾಗದ ಚಿತ್ರೀಕರಣವೆಲ್ಲ ಮುಗಿದಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಚಿತ್ರತಂಡದಿಂದ ಬಂದಿಲ್ಲವಾದರೂ, ಕೇಳಿಬರುತ್ತಿರೋ ಸುದ್ದಿಗಳು ಖಾತರಿ ಪಡಿಸುತ್ತಿವೆ. ಈ ಮೂಲಕ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹನ್ನೊಂದನೇ ಸಿನಿಮಾ ‘ಯುಐ’ ನಿರೀಕ್ಷೆಗಳನ್ನೆಲ್ಲ ಹೆಚ್ಚಿಸಿಕೊಳ್ಳುತ್ತಿದೆ.