ತಮ್ಮ ಮಧುರ ಕಂಠದಿಂದ, ಅಭಿನಯ ಶೈಲಿಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದವರು ನಟ ವಸಿಷ್ಠ ಸಿಂಹ. ಅಭಿಮಾನಿಗಳ ಹೃದಯ ಗೆದ್ದ ನಾಯಕನಾದರೂ ಅವರಿಗೆ ಕೆಲವೊಮ್ಮೆ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷಿತ ಯಶಸ್ಸು ದೊರಕಿಲ್ಲವೆಂದೇ ಹೇಳಬಹುದು. ಆದರೆ ಈ ಪ್ರತಿಭಾವಂತ ನಟನನ್ನು ಗುರುತಿಸಿ ಬೇರೆ ಬೇರೆ ಚಿತ್ರರಂಗದಿಂದಲೂ ಅವಕಾಶಗಳು ಅರಸಿ ಬರುತ್ತಿವೆ ಎನ್ನುವುದು ಕನ್ನಡಿಗರಿಗೊಂದು ಹೆಮ್ಮೆಯ ವಿಷಯ.
ಹೌದು, ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ವಸಿಷ್ಠ ಸಿಂಹ ಇದೀಗ ‘ಓದೆಲಾ ರೇಲ್ವೇ ಸ್ಟೇಷನ್’ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆಹಾ ಒಟಿಟಿಯಲ್ಲಿ ಇದೇ ಆಗಸ್ಟ್ 26ರಂದು ಸಿನಿಮಾ ಬಿಡುಗಡೆಯಾಗಿದ್ದು, ಇವರ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಧೋಬಿಯೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರದಂತಹ ಪಾತ್ರದಲ್ಲಿ ವಸಿಷ್ಠ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಗೆದ್ದ ಖುಷಿಯಲ್ಲಿದ್ದಾರೆ ನಟ. ಈ ಚಿತ್ರದಲ್ಲಿ ವಸಿಷ್ಠ ನಾಯಕ ಹಾಗೂ ಖಳನಾಯಕ ಎರಡೂ ಪಾತ್ರವನ್ನು ನಿಭಾಯಿಸಿರುವುದು ಇನ್ನೊಂದು ವಿಚಾರ.
ಓದೆಲಾ ಹೆಸರಿನ ಊರಿನಲ್ಲಿ ಒಂದರ ಹಿಂದೊಂದು ಕೊಲೆ, ಅತ್ಯಾಚಾರಗಳು ನಡೆಯುತ್ತವೆ. ಐಪಿಎಸ್ ಮುಗಿಸಿ ತರಬೇತಿಗೆಂದು ಅಧಿಕಾರಿಯೊಬ್ಬ ಅದೇ ಊರಿಗೆ ಬರುತ್ತಾನೆ. ಮದುವೆಯಾಗಿ ಫಸ್ಟ್ ನೈಟ್ ಆದ ಯುವತಿಯರೇ ಕೊಲೆಗಾರನ ಗುರಿಯಾಗುವುದನ್ನು ಗಮನಿಸಿ ಅದೇ ಹಾದಿಯಲ್ಲಿ ತನಿಖೆ ಮುಂದುವರೆಸುತ್ತಾರೆ ಪೊಲೀಸರು. ಈ ಕೊಲೆಗಳನ್ನು ಯಾರು ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ, ಕೊಲೆಗಾರ ಸಿಗುವುದು ಹೇಗೆ ಎಂಬುದೇ ಸಿನಿಮಾದ ಕತೆ.

ಅಂದಹಾಗೇ ‘ಓದೆಲಾ ರೇಲ್ವೇ ಸ್ಟೇಷನ್’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.
ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ.

ಸದ್ಯ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೆವಿಲ್ ಸೇರಿದಂತೆ ಸಾಕಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ವಸಿಷ್ಠ ಅವರು ಇನ್ನಷ್ಟು ಉತ್ತಮ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡುವಂತಾಗಲಿ ಎಂದು ಆಶಿಸೋಣ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ