ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕ ನಟ ನಟಿಯರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯವಾದ ಸಂಗತಿ. ಇತ್ತೀಚಿನ ದಿನಗಳಲ್ಲಿ ಅದು ಒಂದು ಟ್ರೆಂಡ್ ಆಗಿದೆ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ಕನ್ನಡ ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿದ ನಟ ನಟಿಯರು ಇಂದು ಪರಭಾಷೆಯ ಕಿರುತೆರೆಯಲ್ಲಿ ತಮ್ಮ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಆ ಸಾಲಿಗೆ ಸೇರಿದವರ ಪೈಕಿ ಆಶಿಕಾ ಪಡುಕೋಣೆ ಕೂಡಾ ಒಬ್ಬರು.

ಮೂಲತಃ ಕನ್ನಡದವರಾದ ಆಶಿಕಾ ಪಡುಕೋಣೆ, ಈಗ ಪರಭಾಷೆಯ ಕಿರುತೆರೆಯಲ್ಲಿ ನಯನಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಜೀ ತೆಲುಗಿನ ಜನಪ್ರಿಯ ಧಾರಾವಾಹಿ ‘ತ್ರಿನಯನಿ’ಯಲ್ಲಿ ನಾಯಕಿ ನಯನಿಯಾಗಿ ಅಭಿನಯಿಸುತ್ತಿರುವ ಕನ್ನಡದ ಹುಡುಗಿ ಆಶಿಕಾ ಮನೋಜ್ಞ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.

ತ್ರಿನಯಿನಿಯು ನನ್ನ ಬಣ್ಣದ ಬದುಕಿಗೆ ಮಹತ್ತರವಾದ ತಿರುವು ನೀಡಿದ ಧಾರಾವಾಹಿ ಎಂದು ಸಂತಸದಿಂದ ಹೇಳುವ ಆಶಿಕಾ ಪಡುಕೋಣೆ ಜೀ ಕುಟುಂಬಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉತ್ತಮ ಕಥಾನಾಯಕಿ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದಾರೆ.

‘ರಾಜಕುಮಾರಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಆಶಿಕಾ ಪಡುಕೋಣೆ ಮುಂದೆ ತ್ರಿವೇಣಿ ಸಂಗಮ, ನಿಹಾರಿಕಾ, ತಮಿಳ್ ಸೆಲ್ವಿ, ಕಥಾಲೋ ರಾಜಕುಮಾರಿ ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ತೆಲುಗಿನ ತ್ರಿನಯಿನಿಯಲ್ಲಿ ನಾಯಕಿಯ ಪಾತ್ರಕ್ಕೆ ಈಕೆ ಜೀವ ತುಂಬುತ್ತಿದ್ದು ಆ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಡಬ್ಬಿಂಗ್ ಗೊಂಡು ಪ್ರಸಾರವಾಗುತ್ತಿದೆ. ಆ ಮೂಲಕ ನಯನಿಯಾಗಿ ಕನ್ನಡ ವೀಕ್ಷಕರನ್ನು ಸೆಳೆಯುತ್ತಿದ್ದಾರೆ ಆಶಿಕಾ ಪಡುಕೋಣೆ.

ಉತ್ತಮ ಕಥೆ ಮತ್ತು ಒಳ್ಳೆಯ ಪಾತ್ರ ದೊರೆತರೆ ನಾನು ಕನ್ನಡ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಲು ತಯಾರಿದ್ದೇನೆ ಎಂದು ಹೇಳುವ ಆಶಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿಯೂ ಸಕತ್ ಆಕ್ಟೀವ್ ಹೌದು. ತಮ್ಮ ಹೊಸ ಮನೆಯ ಹೋಮ್ ಟೂರ್ ಜೊತೆಗೆ ತಾವು ಹೋಗಿರುವಂತಹ ಟ್ರಕ್ಕಿಂಗ್, ಗೋವಾ ಟ್ರಿಪ್, ಹನಿಮೂನ್ ರೂಮ್ ಇದೆಲ್ಲದರ ಬಗ್ಗೆಯೂ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಬಹುಮುಖ್ಯವಾದ ವಿಚಾರವೆಂದರೆ ಪಿರಿಯಡ್ಸ್ ಬಗ್ಗೆ ವೀಡಿಯೋ ಮಾಡಿರುವ ಆಶಿಕಾ ಪಡುಕೋಣೆ ಟಿಪ್ಸ್ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.

ಒಟ್ಟಿನಲ್ಲಿ ನಟಿ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರೆ ತಪ್ಪಲ್ಲ. ಸೋಶಿಯಲ್ ಮೀಡಿಯಾ ಬಳಕೆದಾರರಿಗಂತೂ ಇವರ ಬಗ್ಗೆ ಅಪ್ ಟು ಡೇಟ್ ಮಾಹಿತಿ ಸಿಗುವುದರಲ್ಲಿ ಸಂಶಯವಿಲ್ಲ.

ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಆಶಿಕಾ ಪಡುಕೋಣೆ ವಿವಾಹದ ನಂತರವೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ನಾನಿಂದು ನಟಿಯಾಗಿದ್ದೇನೆ, ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಮನೆಯವರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹವೇ ಮುಖ್ಯ ಕಾರಣ” ಎಂದು ಹೇಳುತ್ತಾರೆ ಆಶಿಕಾ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ