ಝೀ ಕನ್ನಡದಲ್ಲಿ ವಿಶೇಷವಾದ ರಿಯಾಲಿಟಿ ಶೋ ಸೂಪರ್ ಕ್ವೀನ್ ಪ್ರಸಾರವಾಗುತ್ತಿದೆ. ಶನಿವಾರ ಮತ್ತು ಭಾನುವಾರ ಸಂಜೆ ಆರು ಗಂಟೆಗೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕಷ್ಟಗಳನ್ನು ಅನುಭವಿಸಿ ಗೆದ್ದ ಹಲವು ಸಾಧಕೀಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅಂತಹವರ ಮಧ್ಯೆ ವಿಶೇಷ ಸ್ಪರ್ಧಿಯಾಗಿ ಭಾಗವಹಿಸುತ್ತಿರುವವರು ಮಂಗಳಮುಖಿ ನೀತು ವನಜಾಕ್ಷಿ. ಅಷ್ಟಕ್ಕೂ ನೀತು ವನಜಾಕ್ಷಿ ಯಾರೆಂದರೆ ಮಿಸ್ ಇಂಟರ್‌ನ್ಯಾಶನಲ್ ಕಿರೀಟ ತೊಟ್ಟ ಭಾರತದ ಮೊದಲ ಮಂಗಳಮುಖಿ.

ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ನೀತು ಎಲ್ಲಾ ಟ್ರಾನ್ಸ್ ಜೆಂಡರ್ ಗಳಂತೆ ಮನೆಯ ಮಗನಾಗಿದ್ದರು. ಇವರ ಬಾಲ್ಯದ ಹೆಸರು ಮಂಜುನಾಥ್. ಏಳನೇ ಕ್ಲಾಸಿನ ತನಕ ಎಲ್ಲವೂ ಸರಿಯಾಗಿದ್ದ ಮಂಜುನಾಥ್ ಗೆ ನಂತರ ತಾನು ಉಳಿದ ಹುಡುಗರಂತೆ ಅಲ್ಲ, ಬೇರೆ ಎಂದೆನಿಸತೊಡಗಿತಂತೆ. ಪ್ರೌಢಾವಸ್ಥೆಯಲ್ಲಿ ಸ್ನೇಹಿತರೆಲ್ಲಾ ಹುಡುಗಿಯರ ಕನಸು ಕಾಣುತ್ತಿದ್ದರೆ ಇವರಿಗೆ ಹುಡುಗಿಯರಂತೆ ಬದುಕುವ, ಡ್ರೆಸ್ ಹಾಕುವ, ಮೇಕಪ್ ಮಾಡಿಕೊಳ್ಳುವ ಆಸೆ ಆಗುತ್ತಿತ್ತು. ಆದರೆ ಮನೆಯವರಿಂದ ತಿರಸ್ಕೃತನಾಗಬಹುದು, ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗಬಹುದು ಎಂಬ ಭಯದಲ್ಲಿ ಏನೂ ಹೇಳಿಕೊಳ್ಳದೆ ಉಳಿದೆ ಎನ್ನುತ್ತಾರೆ.

ತಾನು ಓದಿ ಒಂದು ಹಂತ ತಲುಪಿದ ಮೇಲೆ ತನ್ನ ನೈಜ ವಿಚಾರವನ್ನು ಬಹಿರಂಗ ಮಾಡಿದ ಕಾರಣ ಇದೆಲ್ಲ ಸಾಧ್ಯವಾಯಿತು ಎಂದು ಹೇಳುತ್ತಾರೆ ನೀತು. ‘ಅಂದೊಮ್ಮೆ ನಾನು ಬ್ಯೂಟಿ ಪೇಟೆಂಟ್ ಪದ್ಯದಲ್ಲಿ ಗೆದ್ದಿದ್ದೆ. ಹೆಣ್ಣಿನ ಉಡುಗೆಯಲ್ಲಿ ಕಿರೀಟದ ಜೊತೆಗೆ ಅಮ್ಮನ ಮುಂದೆ ನಿಂತಿದ್ದೆ. ಅಮ್ಮ ನನ್ನನ್ನು ನೋಡಿ ಬಹಳ ಚೆನ್ನಾಗಿ ಕಾಣಿಸ್ತಿದ್ದೀಯ ಅಂದ್ರು. ಆ ಕ್ಷಣ ನಾನು ಆಗಷ್ಟೇ ಹುಟ್ಟಿದ್ದೆನೋ ಅನಿಸಿತ್ತು. ಅಮ್ಮನ ಬಳಿ ಇದೇ ನಿಜವಾದ ನಾನೆನ್ನುವ ವಿಷಯವನ್ನು ಬಹಿರಂಗ ಪಡಿಸಿದೆ. ಶುರುವಲ್ಲಿ ನೋವಾದರೂ ಅವರು ಆಮೇಲೆ ಒಪ್ಪಿಕೊಂಡರು’ ಎಂದು ತನ್ನ ಬದುಕಿನ ವಿವರ ತೆರೆದಿಡುತ್ತಾರೆ ನೀತು. ಸೂಪರ್‌ಕ್ವೀನ್ ವೇದಿಕೆಯಲ್ಲೂ ನೀತು ಅವರ ಅಮ್ಮ ‘ಆತ ಮಗನಾಗಿದ್ದಕ್ಕಿಂತಲೂ ಮಗಳಾಗಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎನ್ನುತ್ತಾ ಅವರ ವಿಶ್ವಾಸವನ್ನು ಹೆಚ್ಚಿಸಿದ್ದಾರೆ.

ಪ್ರಸ್ತುತ ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ ‘ಗಮ ಗಮ’ ಅನ್ನೋ ಹೊಟೇಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಿ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲಿ, ಬ್ಯೂಟಿ ಪೇಟೆಂಟ್ ಗಳಲ್ಲೂ ಗುರುತಿಸಿಕೊಂಡಿದ್ದಾರೆ.

‘ನಾನು ಹಾಕಿದ ಟ್ಯಾಟೂ ಮೂಲಕ ಜನ ನನ್ನನ್ನು ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ. ಈ ಐಡೆಂಟಿಟಿ ಸಿಕ್ಕ ಮೇಲೆ ಜನ ಜೆಂಡರ್ ನೋಡಲ್ಲ, ಟ್ಯಾಲೆಂಟ್ ನೋಡುತ್ತಾರೆ’ ಎನ್ನುವ ನೀತುಗೆ ತಾನೊಬ್ಬ ಟ್ಯಾಟೂ ಕಲಾವಿದೆ ಎಂಬ ಹೆಮ್ಮೆಯಿದೆ. ವಿಷ್ಯುವಲ್ ಆರ್ಟ್ಸ್ ನಲ್ಲಿ ಪದವಿ ಪಡೆದಿರುವ ನೀತು ಮಾಡೆಲಿಂಗ್, ಹೊಟೇಲ್ ಉದ್ಯಮದಲ್ಲೂ ಸೈ ಅನಿಸಿಕೊಂಡಿದ್ದಾರೆ.

ಸದ್ಯಕ್ಕೆ ಇವರು ಸೂಪರ್ ಕ್ವೀನ್ ಕಿರೀಟ ಮುಡಿಗೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ‘ನಾನೇನೂ ತಪ್ಪು ಮಾಡಿಲ್ಲ, ಪ್ರಕೃತಿಯಿಂದಲೇ ನಾನು ಈ ರೀತಿಯಾಗಿ ಹುಟ್ಟಿರುವುದು. ಹೀಗಿರುವಾಗ ನಾನ್ಯಾಕೆ ಗಿಲ್ಟ್ ಪಡಲಿ, ಎಲ್ಲರಂತೆ ಬದುಕುವುದಕ್ಕೆ ಯಾಕೆ ಅಂಜಿಕೆ ಪಡಲಿ’ ಎಂದು ಧೈರ್ಯದಿಂದ ಪ್ರಶ್ನಿಸುವ ನೀತು ಮುಂದೆ ದೊಡ್ಡದಾಗಿ ಸಾಧನೆ ಮಾಡುವ ಕನಸಿನಲ್ಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ