ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಗೇಮ್ಸ್ ರೋಚಕತೆಯಿಂದ ಕೂಡಿದೆ. 72 ರಾಷ್ಟ್ರಗಳಿಂದ 5 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಕಣಕ್ಕಿಳಿದು, ಪೈಪೋಟಿ ನೀಡುತ್ತಿದ್ದಾರೆ.

ಮಹಿಳಾ ಕ್ರಿಕೆಟ್, 3*3 ಬಾಸ್ಕೆಟ್‌ಬಾಲ್, ವ್ಹೀಲ್ ಚೇರ್ ಬಾಸ್ಕೆಟ್‌ಬಾಲ್, ಪ್ಯಾರಾ ಟೇಬಲ್ ಟೆನ್ನಿಸ್ ಕ್ರೀಡೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಸಾವಿರಾರು ಕ್ರೀಡಾ ಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದು, ಇದರ ಟಾಪ್-10 ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಳೆದ ಮೂರು ದಿನಗಳಿಂದಲೂ ಭಾರತ ಪದಕಗಳ ಭರ್ಜರಿ ಬೇಟೆಯಾಡುತ್ತಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಅವರು ಬೆಳ್ಳಿ ಪದಕ ಪಡೆಯುವ ಮೂಲಕ ಖಾತೆ ತೆರೆದ ಭಾರತ ಕಳೆದ ಮೂರು ದಿನಗಳಲ್ಲಿ 3 ಚಿನ್ನ ಸೇರಿ ಒಟ್ಟು 9 ಪದಕಗಳನ್ನು ಪಡೆಯುವ ಮೂಲಕ 6ನೇ ಸ್ಥಾನಕ್ಕೆ ಜಿಗಿದಿದೆ.

ಆಸ್ಟ್ರೇಲಿಯಾ 31 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಸೇರಿ 71 ಪದಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. 21 ಚಿನ್ನ, 22 ಬೆಳ್ಳಿ ಹಾಗೂ 11 ಕಂಚಿನ ಪದಕ ಪಡೆದ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ 24 ಪದಗಳನ್ನು ಪಡೆದ ನ್ಯೂಜಿಲೆಂಡ್ 3ನೇ ಸ್ಥಾನ, 33 ಪದಕ ಪಡೆದ ಕೆನಡಾ 4ನೇ ಸ್ಥಾನ, 12 ಪದಕ ಪಡೆದ ಸೌತ್ ಆಫ್ರಿಕಾ 5ನೇ ಸ್ಥಾನದಲ್ಲಿದ್ದು, 9 ಪದಕಗಳನ್ನು ಪಡೆದ ಭಾರತ 6ನೇ ಸ್ಥಾನ ಉಳಿಸಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಭಾರತ 12-16ನೇ ಸ್ಥಾನದಲ್ಲಿತ್ತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಪಡೆದರು. ನಂತರದಲ್ಲಿ ಜೆರೆಮಿ ಲಾಲ್ರಿನ್ನುಂಗಾ, ಅಚಿಂತ್ ಶೆಯುಲಿ ತಲಾ ಒಂದೊಂದು ಚಿನ್ನದ ಪದಕ ಗಿಟ್ಟಿಸಿಕೊಂಡರು. ಸಂಕೇತ್ ಸರ್ಗರ್, ಬಿಂದ್ಯಾರಾಣಿ ದೇವಿ ಹಾಗೂ ಸುಶೀಲಾ ದೇವ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಕನ್ನಡಿಗ ಗುರುರಾಜ್ ಪೂಜಾರಿ, ವಿಜಯ್‌ಕುಮಾರ್ ಯಾದವ್ ಹಾಗೂ ಹರ್ಜಿಂದರ್ ಕೌರ್ ಕಂಚಿನ ಪದಕಗಳನ್ನು ಗೆದ್ದು ಬೀಗಿದ್ದಾರೆ.
ದೇಶ-ವಿದೇಶಗಳಿಂದ ಸಾವಿರಾರು ಕ್ರೀಡಾಪ್ರತಿಭೆಗಳು ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಈ ನೆಡುವೆ ಭಾರತದ ಯುವ ಸಮೂಹ ಹೊಸ ದಾಖಲೆ ಬರೆಯುವತ್ತ ದಾಪುಗಾಲು ಹಾಕುತ್ತಿದೆ. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯಮಾನ್ಯರು ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.