ಚಿತ್ರದುರ್ಗದಲ್ಲಿರುವ ಮುರುಘಾ ಮಠಕ್ಕೆ 1905 ರಿಂದ 1956 ರವರೆಗೆ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳು ಅದರ 17ನೇ ಪೀಠಾಧ್ಯಕ್ಷರಾಗಿದ್ದರು. ಒಮ್ಮೆ ಪೂರ್ವಾಶ್ರಮದ ಅವರ ತಾಯಿ ಭ್ರಮರಾಂಬ ಅವರಿಗೆ ತಮ್ಮ ಮಗ ಪೀಠಾಧಿಪತಿಯಾಗಿರುವುದನ್ನು ಕಣ್ಣಾರೆ ನೋಡಿ ಆನಂದಿಸಬೇಕೆಂಬ ಹಂಬಲದಿಂದ ಚಿತ್ರದುರ್ಗಕ್ಕೆ ಬಂದರು. ಉಳಿದ ಭಕ್ತರೆಲ್ಲರಿಗೆ ಅವರು ಜಗದ್ಗುರುಗಳು, ಆದರೆ ತಾಯಿ ಅವರಲ್ಲಿ ತನ್ನ ಪ್ರೀತಿಯ ಮಗನನ್ನು ನೋಡಲು ತವಕ ಪಟ್ಟಳು. ತನ್ನ ಕಣ್ಣೆದುರಿಗೆ ಮುಖವೆಲ್ಲಾ ವಿಭೂತಿಯಿಂದ ಅಲಂಕೃತವಾಗಿ, ಕೊರಳಲ್ಲಿ ರುದ್ರಾಕ್ಷಿ ಮಾಲೆಗಳನ್ನು ಧರಿಸಿದ ಸ್ವಾಮಿಗಳು.
ಮಗನನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಳ್ಳಬೇಕೆಂದು ಚಾಚಿದ ಆಕೆಯ ಕೈಗಳು ಅಪ್ರಯತ್ನಪೂರ್ವಕವಾಗಿ ಸ್ವಾಮೀಜಿಯ ಪಾದಗಳನ್ನು ಸ್ಪರ್ಶಿಸಿದವು. ಅದರಿಂದ ಸ್ವಾಮಿಗಳು ಸ್ವಲ್ಪ ವಿಚಲಿತರಾದಂತೆ ಕಂಡಿತು! ತಾಯಿಯನ್ನು ಆಶೀರ್ವದಿಸಲು ಅವರ ನಾಲಿಗೆ ತಡವರಿಸಿತು. ಕೂಡಲೇ ಮೋಹ, ಮಮತೆಗಳಿಗೆ ವಿವೇಕವೆನ್ನುವ ಅಂಕುಶವನ್ನು ಹಾಕಿ ಎಲ್ಲರಿಗೂ ಹೇಳುವಂತೆ ಆಕೆಗೂ ಸಹ, “ಪ್ರಸಾದ ತೆಗೆದುಕೊಂಡು ಹೋಗಿ” ಎಂದು ಹೇಳಿದರು. ತಮ್ಮ ಸ್ವಂತ ತಾಯಿಯವರಿಗೆ “ಹೋಗಿ” ಎಂದು ಬಹುವಚನದಿಂದ ಸಂಬೋಧಿಸಿದ್ದು ಕರ್ಣಕಠೋರವೆನಿಸಿ ಸುತ್ತಲಿದ್ದ ಭಕ್ತರನ್ನು ಒಂದು ಕ್ಷಣ ಸ್ತಬ್ಧರಾಗುವಂತೆ ಮಾಡಿತು.
ಮಠದಲ್ಲಿದ್ದ ಸಹಾಯಕರು ಆ ತಾಯಿಯವರಿಗೆ ಪ್ರಸಾದವನ್ನು ನೀಡಿದರು (ಊಟಕ್ಕೆ ಬಡಿಸಿದರು). ಅವರು ಪ್ರಸಾದ ಸ್ವೀಕರಿಸಿದ ನಂತರ ಅವರನ್ನು ಖಾಲಿ ಕೈಗಳಿಂದ ಹೇಗೆ ಕಳುಹಿಸುವುದು ಎಂದು ಆಲೋಚಿಸಿದ ಆ ಮಠದ ಮೇಲ್ವಿಚಾರಕರು ಒಂದು ಸೀರೆ ಮತ್ತು ರವಿಕೆಗಳನ್ನು ತರಿಸಿ ಆಕೆಗೆ ಉಡಿ ಕೊಟ್ಟು ಕಳುಹಿಸಿದರು.
ಕೆಲವು ದಿನಗಳ ನಂತರ ಸ್ವಾಮಿಗಳು ಮಠದ ಲೆಕ್ಕದ ಪುಸ್ತಕಗಳನ್ನು ನೋಡುತ್ತಿದ್ದಾಗ ಸೀರೆ ಮತ್ತು ರವಿಕೆಗಳ ಖರ್ಚು ನಮೂದಿಸಿದ್ದನ್ನು ನೋಡಿ, ನಡೆದ ವಿಷಯವನ್ನು ತಿಳಿದುಕೊಂಡು ಆ ಖರ್ಚಿನ ಬಾಬ್ತನ್ನು ಮಠದ ಮೇಲ್ವಿಚಾರಕರು ತಮ್ಮ ಸ್ವಂತ ದುಡ್ಡಿನಿಂದ ತುಂಬಬೇಕೆಂದು ಆದೇಶಿಸಿದರು.
ಸರ್ವ ಸಂಗ ಪರಿತ್ಯಾಗಿ ಶ್ರೀ ಹಿರಿಯ ಜಗದ್ಗುರುಗಳಿಗೆ ಕೋಟಿ ನಮನಗಳು
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ