ಕನ್ನಡದಲ್ಲಿ ತೆರೆಕಂಡ ಕಾಂತಾರ ಇಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬದಲಾಗಿದೆ. ಕಾಂತಾರದ ಅಬ್ಬರ ಮುಂದುವರೆಯುತ್ತಲೇ ಇದೆ. ಭಾರತದ ಹಲವು ಪ್ರಧಾನ ಭಾಷೆಗಳಲ್ಲಿ ತೆರೆ ಕಂಡ ಸಿನೆಮಾ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಬರೆದಿದೆ. ಅಷ್ಟೇ ಅಲ್ಲದೆ ಅದೆಷ್ಟೋ ಸೆಲೆಬ್ರಿಟಿಗಳು, ನಾಯಕರು ಸಿನಿಮಾ ಮೆಚ್ಚಿ ಕಮೆಂಟ್ ಮಾಡುತ್ತಲೇ ಬಂದಿದ್ದಾರೆ. ಅಭಿಮಾನಿಗಳಲ್ಲಂತೂ ಎರಡು ಮೂರು ಬಾರಿ ಥಿಯೇಟರ್ ಗೆ ಹೋಗಿ ಬಂದವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದೀಗ ‘ಕಾಂತಾರ’ ಸಿನಿಮಾಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ, ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ‘ಕಾಂತಾರ’ ಸಿನಿಮಾ ವೀಕ್ಷಿಸಿರುವ ವಿವೇಕ್ ಅಗ್ನಿಹೋತ್ರಿ ಇದನ್ನು “ಮಾಸ್ಟರ್ ಪೀಸ್” ಎಂದು ಕರೆದಿದ್ದಾರೆ.

ಸೆಲ್ಫಿ ವಿಡಿಯೋವೊಂದರ ಮೂಲಕ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ವೀಡಿಯೋವನ್ನು ಹಂಚಿಕೊಂಡ ವಿವೇಕ್, “@shetty_rishab ಅವರ ಮಾಸ್ಟರ್ ಪೀಸ್ #ಕಾಂತಾರವನ್ನು ನೋಡಿ ಮುಗಿಸಿದೆ. ಒಂದೇ ಪದದಲ್ಲಿ ಇದು ಕೇವಲ ವಾಹ್! ಅದ್ಭುತ ಅನುಭವ. ಸಾಧ್ಯವಾದಷ್ಟು ಬೇಗ ಅದನ್ನು ವೀಕ್ಷಿಸಿ” ಎಂದು ಕರೆ ನೀಡಿದ್ದಾರೆ.

”ಕಾಂತಾರ ಒಂದು ರೀತಿಯ ಕಾದಂಬರಿಯ ಅನುಭವವನ್ನು ನೀಡಿತು. ವಿಶೇಷವಾಗಿ ಕ್ಲೈಮ್ಯಾಕ್ಸ್ ಅಂತೂ ಸೂಪರ್, ಸಿನಿಮಾದಲ್ಲಿ ಜಾನಪದ ಕಲೆಯ ಬಗ್ಗೆ ಅಚ್ಚುಕಟ್ಟಾಗಿ ಹೇಳಿದ್ದಾರೆ. ಈ ಸಿನಿಮಾವನ್ನು ತಪ್ಪದೇ ಎಲ್ಲರೂ ನೋಡಿ. ದೀಪಾವಳಿ ಮುಗಿದ ನಂತರ ಚಿತ್ರಮಂದಿರಕ್ಕೆ ಬಂದು ಆದಷ್ಟು ಎಲ್ಲರೂ ನೋಡಲೇಬೇಕು” ಎಂದು ಹೇಳಿರುವ ವಿಡಿಯೋ ಟ್ಟಿಟರ್ ನಲ್ಲಿ ವೈರಲ್ ಆಗಿದೆ.

ಎರಡನೇ ಬಾರಿಗೆ ತಮ್ಮ ಸಹಾಯಕರೊಂದಿಗೆ ಚಿತ್ರ ನೋಡಿದ ವಿವೇಕ್ ”ಚಿತ್ರ ನೋಡಿದ ಗಂಟೆಗಳ ನಂತರವೂ, ರಾತ್ರಿ ಕೂಡ ಚಿತ್ರದ ಬಗ್ಗೆ ಯೋಚಿಸುತ್ತಲೇ ಇರುವಂತೆ ಮಾಡುತ್ತದೆ” ಎಂದರು. ಅಂದ ಹಾಗೆ ಚಿತ್ರ ವಾರಾಂತ್ಯದಲ್ಲಿ 200 ಕೋಟಿ ಗಳಿಕೆ ಮಾಡುವ ಭರವಸೆಯನ್ನು ರಿಷಬ್ ಶೆಟ್ಟಿ ಹೊಂದಿದ್ದಾರೆ.

ಅಂತೂ ಭಾರತೀಯ ಚಿತ್ರರಂಗದ ಖ್ಯಾತನಾಮರು ಕಾಂತಾರಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕಂಗನಾ ರಣಾವತ್, ಪ್ರಭಾಸ್, ಅನುಷ್ಕಾ ಶೆಟ್ಟಿ, ಧನುಷ್ ಹೀಗೇ ಮುಂತಾದ ಸ್ಟಾರ್ ಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ಡಿ ವೀರೇಂದ್ರ ಹೆಗಡೆ ತಮ್ಮ ಕುಟುಂಬ ಸಮೇತ ಕಾಂತಾರವನ್ನು ವೀಕ್ಷಿಸಿದರು. ಒಟ್ಟಿನಲ್ಲಿ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿರುವ ಸಿನಿಮಾ, ಸಿನೆಮಾದ ಭಾಗವಾಗಿರುವ ಪ್ರತಿಯೊಬ್ಬರಿಗೂ ಒಳ್ಳೆಯ ಭವಿಷ್ಯ ಬರೆದಂತಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ