ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿರುವ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ ಇದೀಗ ಗಜರಾಮನ ಬೆಡಗಿಯಾಗಿ ತೆರೆ ಮೇಲೆ ಮಿಂಚಲು ತಯಾರಾಗಿದ್ದಾರೆ. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ನಿರ್ದೇಶನದಡಿಯಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ರಾಜವರ್ಧನ್ ಅವರು ನಾಯಕರಾಗಿ ನಟಿಸಲಿದ್ದು, ಅದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶವನ್ನು ಮಂಜಿನ ನಗರಿಯ ಚೆಲುವೆ ಪಡೆದುಕೊಂಡಿದ್ದಾರೆ.

ಗಜರಾಮ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿರುವ ತಪಸ್ವಿನಿ ಪೂಣಚ್ಚ ಸಕತ್ ಖುಷಿಯಲ್ಲಿದ್ದಾರೆ. ತಮ್ಮ ನಟನಾ ಜರ್ನಿಯ ಬಗ್ಗೆ ಮಾತನಾಡಿರುವ ತಪಸ್ವಿನಿ “ನಾನು ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ಆಕಸ್ಮಿಕವಾಗಿ ಆಯ್ಕೆಯಾದೆ. ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂಬುದು ನನ್ನ ಆಯ್ಕೆಯಾಗಿರಲಿಲ್ಲ. ನಾನು ಇಂದು ನಟಿಯಾಗಲು ಇನ್ ಸ್ಟಾಗ್ರಾಂ ಕೂಡಾ ಕಾರಣ ಎನ್ನಬಹುದು. ಯಾಕೆಂದರೆ ಇನ್ ಸ್ಟಾಗ್ರಾಂನಲ್ಲಿ ನನ್ನ ಫೋಟೋ ನೋಡಿದ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ತಂಡ ನನ್ನನ್ನು ಸಂಪರ್ಕಿಸಿತು. ಕಥೆ ಕೇಳಿದ ನಂತರ ಖುಷಿಯಾಗಿ ನಟಿಸಲು ಒಪ್ಪಿಕೊಂಡೆ” ಎಂದು ಹೇಳುತ್ತಾರೆ.

“ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ನಂತರ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಬರುತ್ತಿದೆ. ಗಜರಾಮ ಸಿನಿಮಾದ ಕಥೆಯ ಜೊತೆಗೆ ಪಾತ್ರವೂ ಕೂಡಾ ಖುಷಿಯಾಯಿತು. ಹಳ್ಳಿ ಹುಡುಗಿ ಅವತಾರದಲ್ಲಿ ನಾನು ನಿಮ್ಮನ್ನು ರಂಜಿಸಲು ಬರುತ್ತಿದ್ದೇನೆ” ಎಂದು ಹೇಳುತ್ತಾರೆ ತಪಸ್ವಿನಿ ಪೂಣಚ್ಚ.

ಆಕ್ಷ್ಯನ್ ಮಾಸ್ ಎಂಟರ್ ಟೈನರ್ ಒಳಗೊಂಡ ಈ ಸಿನಿಮಾಕ್ಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಇನ್ನು ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್‌ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ