ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಚಿತ್ರಗಳ ಕಡೆ ಮುಖ ಮಾಡಿರುವುದನ್ನು ನೀವೇ ನೋಡುತ್ತಿದ್ದೀರಿ. ಹಳ್ಳಿಗಳ ಸೊಗಡು, ಸಂಸ್ಕೃತಿ, ಭಾಷೆ ಇತ್ಯಾದಿ ಎಲ್ಲವೂ ಇಂದಿನ ಹೊಂದಿಕೊಂಡು ಚಿತ್ರಕ್ಕೆ ಹೊಸ ಮೆರಗು ತರುತ್ತಿದೆ. ಅಂಥದ್ದೇ ಒಂದು ಸಿನಿಮಾ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ”. ಕನ್ನಡದ ಸಂಸ್ಕೃತಿಯನ್ನು ಹೇಳಲಿರುವ ಈ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಹೊಚ್ಚ ಹೊಸ ವಿಭಿನ್ನ ಕಥೆಯ ಚಿತ್ರದ ಟ್ರೈಲರ್ ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂಬುದೇ ಸಂತೋಷದ ಸಮಾಚಾರ.

ಅಲ್ಲಿಯ ಸ್ಥಳೀಯ ಪ್ರತಿಭೆಗಳನ್ನು ವಿಶೇಷವಾಗಿ ವಿಭಿನ್ನವಾಗಿ ಬಳಸಿಕೊಳ್ಳಲಾಗಿದೆ, ಕನ್ನಡ ಭಾಷೆಯನ್ನೂ ಇಲ್ಲಿ ಬಳಸಲಾಗಿದೆ. ಬಹಳ ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ಚಿತ್ರದ ಟೈಟಲ್ ಹೇಳಿದಂತೆ ಇದು ಒಂದು ಫೋಟೋಗ್ರಾಫರ್ ಕಥೆಯಾಗಿದೆ. ಫೋಟೋಗ್ರಾಫರ್ ಸ್ಟುಡಿಯೋ ಜೊತೆಗೆ ಯಾವ ರೀತಿಯ ಸಂಬಂಧ ಇಟ್ಟುಕೊಂಡಿರುತ್ತಾನೆ ಎಂದು ಭಾವನಾತ್ಮಕವಾಗಿ ಇಲ್ಲಿ ಚಿತ್ರಿಸಲಾಗಿದೆ.

ಅಷ್ಟೇ ಅಲ್ಲದೆ ಒಂದು ಸುಂದರ ಪ್ರೇಮ ಕಥೆಯನ್ನು ಹೇಳಲಿದೆ. ಇನ್ಸೂರೆನ್ಸ್ ಮಾಡಿಸುವವನು ಒಬ್ಬ ಫೋಟೋಗ್ರಾಫರ್ ಹಾಗೂ ಜಮೀನ್ದಾರರ ನಡುವೆ ನಡೆಯುವ ಸಂಘರ್ಷ ಇಡೀ ಚಿತ್ರಕಥೆಯ ಮುಖ್ಯ ಪ್ಲಾಟ್ ಆಗಿದೆ.

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಧ್ರುವ ಈ ಚಿತ್ರಕ್ಕೆ ನಾಯಕನಾಗಿದ್ದಾರೆ. ಇಡೀ ಚಿತ್ರದಲ್ಲಿ ಕಲಾವಿದರಾಗಿ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಖಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ನಟಿಸಲಿದ್ದಾರೆ. ಜೊತೆಗೆ ಇತರೆ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ.

ಸೃಜನ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಿದೆ. ಚಿತ್ರದಲ್ಲಿ ಗಣಪತಿ ಭಟ್ ಅವರ ಸಂಕಲನದ ಎರಡು ಸುಂದರವಾದ ಹಾಡುಗಳಿದ್ದು, ಶ್ರೀರಾಮ್ ಗಂಧರ್ವ ಅವರು ಹಾಡನ್ನು ಸಂಯೋಜಿಸಿದ್ದು, ಸ್ವಸ್ತಿಕ್ ಕಾರೆಕಾಡ್ ಅವರ ಹಿನ್ನಲೆ ಸಂಗೀತವಿದೆ.

ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜೇಶ್ ಧ್ರುವ ಅವರೇ ಚಿತ್ರವನ್ನು ನಿರ್ದೇಶಿಸಿರುವುದು ಇದರ ಇನ್ನೊಂದು ವಿಶೇಷ. ಈ ಮೊದಲು ಆರು ವರ್ಷಗಳ ಕಾಲ ಅಗ್ನಿಸಾಕ್ಷಿಯಲ್ಲಿದ್ದ ರಾಜೇಶ್ ಧ್ರುವ ಅವರು ಅಖಿಲ್ ಆಗಿ ಪ್ರೇಕ್ಷಕರಿಗೆ ಚಿರಪರಿಚಿತ. ಇದೀಗ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರದ ನಟನಾಗಿ ನಿರ್ದೇಶಕನಾಗಿ ಹೇಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ