ನಟ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಗದೊಂದು ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿ”ಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟಿ ಸಿರಿ ರವಿಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ಒಂದು ಮೊಟ್ಟೆಯ ಕಥೆ’ ಚಿತ್ರದಿಂದ ಆರಂಭಿಸಿ ಮೇಲಿಂದ ಮೇಲೆ ಸೂಪರ್ ಹಿಟ್ ಗಳನ್ನೇ ನೀಡುತ್ತಿರುವ ನಟ ನಿರ್ದೇಶಕ ರಾಜ್ ಬಿ ಶೆಟ್ಟಿಯವರು, ಈಗೊಂದು ಹೊಸ ಚಿತ್ರದ ಮೂಲಕ ಹೊರ ಬರುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಅದುವೇ “ಸ್ವಾತಿ ಮುತ್ತಿನ ಮಳೆ ಹನಿ”. ಇತ್ತೀಚೆಗಷ್ಟೇ ಈ ಚಿತ್ರದ ಚಿತ್ರೀಕರಣವು ಮುಗಿದಿದ್ದು ಈ ಬಗ್ಗೆ ಚಿತ್ರದಲ್ಲಿ ನಟಿಸಿರುವ ನಟಿ ಸಿರಿ ರವಿಕುಮಾರ್ ಮಾತನಾಡಿದ್ದಾರೆ.

“ಸ್ವಾತಿ ಮುತ್ತಿನ ಮಳೆ ಹನಿ ಚಿತ್ರದ ಶೂಟಿಂಗ್ ಒಂದು ಅದ್ಭುತ ಅನುಭವ. ಇಡೀ ತಂಡ ವಿಶೇಷವಾಗಿ ವಿಶಿಷ್ಟವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ರಾಜ್ ಬಿ ಶೆಟ್ಟಿ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ. ಪ್ರತಿದಿನವೂ ಏನಾದರೂ ಒಂದು ಹೊಸದನ್ನು ಕಲಿಯುವ ಅವಕಾಶ ಈ ಚಿತ್ರದ ಮೂಲಕ ನನಗೆ ದೊರಕಿದೆ. ಹಲವಷ್ಟು ಹೊಸ ವಿಚಾರಗಳನ್ನು ಕಲಿತಿದ್ದೇನೆ.” ಎಂದರು.

“ಒಬ್ಬ ನಿರ್ದೇಶಕನಾಗಿ ಚಿತ್ರಕಥೆ ಯಾವ ರೀತಿ ಮೂಡಿ ಬರಬೇಕು ನಟರಿಂದ ಯಾವ ರೀತಿ ಕಲೆಯನ್ನು ಹೊರ ತೆಗೆಯಬೇಕು ಎಂದು ರಾಜ್ ಬಿ ಶೆಟ್ಟಿಯವರಿಗೆ ಸ್ಪಷ್ಟವಾಗಿ ಅರಿವಿದೆ. ಅವರ ಬಳಿ ಅದೇನೋ ಒಂದು ಮ್ಯಾಜಿಕ್ ಇದೆ, ಎಲ್ಲವೂ ವಿಭಿನ್ನವಾಗಿ ಮೂಡಿ ಬರುವಂತೆ ಮಾಡುವ ಮ್ಯಾಜಿಕ್ ಅದು. ಕಲಾವಿದರಿಂದ ಹಾಗೂ ಕ್ಯಾಮರದಿಂದ ಕೂಡ ದಿ ಬೆಸ್ಟ್ ಅನ್ನು ಹೊರತೆಗೆಯುವುದರಲ್ಲಿ ನಿಸ್ಸಿಮರು ಎಂದೇ ಹೇಳಬಹುದು. ಅವರಿಗೆ ಚಿತ್ರದ ಬಗ್ಗೆ ಇರುವ ಕ್ಲಾರಿಟಿ ನನಗೆ ತುಂಬಾ ಹಿಡಿಸಿದ್ದ” ಎನ್ನುತ್ತಾರೆ ಸಿರಿ ರವಿಕುಮಾರ್.

“ಶೂಟಿಂಗ್ ಸಮಯ ತುಂಬಾ ಹೆಕ್ಟಿಕ್ ಇದ್ದರೂ ಸಹ ಪ್ರತಿದಿನ ಶೂಟಿಂಗ್ ಗೆ ಹೋಗುವುದೇ ಒಂದು ಖುಷಿ. ಶೂಟಿಂಗ್ ಮುಗಿದ ನಂತರ ಕೊನೆ ದಿನ ನಾನು ತುಂಬಾ ಭಾವುಕಳಾಗಿದ್ದೆ. ಪ್ರತಿ ಸಿನಿಮಾ ಕೊನೆಯಲ್ಲಿ ಈ ರೀತಿ ಅನುಭವ ನನಗೆ ಆಗುತ್ತದೆ ಅದರಲ್ಲೂ ಈ ಚಿತ್ರತಂಡದೊಂದಿಗೆ ಕೆಲಸ ಮಾಡಿ ಕೊನೆ ದಿನ ಬೀಳ್ಕೊಡುವಾಗ ನಿಜವಾಗಲೂ ತುಂಬಾ ಬೇಸರವಾಯಿತು. ಇಷ್ಟು ಒಳ್ಳೆಯ ಚಿತ್ರತಂಡದಲ್ಲಿ ಒಂದೊಳ್ಳೆ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಸಂತೋಷ ಇದೆ.” ಎಂದರು