ಚಂದನ್ ಶೆಟ್ಟಿ… ಕನ್ನಡ ಸಿನಿಮಾ ವೀಕ್ಷಕರಿಗೆ ಅದರಲ್ಲೂ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ವಿಜೇತರಾಗಿ ಹೊರಹೊಮ್ಮಿದ ಚಂದನ್ ಶೆಟ್ಟಿ ಸಕಲಾಕಲಾವಲ್ಲಭ ಹೌದು. ಸಂಗೀತ ನಿರ್ದೇಶಕ, ರ್‍ಯಾಪರ್, ನಟ, ಗಾಯಕ, ಗೀತರಚನೆಕಾರ, ಗಿಟಾರ್ ವಾದಕ, ಡ್ರಮ್ಮರ್ ಹೀಗೆ ಕಲೆಯ ವಿವಿಧ ಪ್ರಕಾರಗಳನ್ನು ಕರಗತ ಮಾಡಿಕೊಂಡಿರುವ ಚಂದನ್ ಇದೀಗ ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

‘ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟುರುವ ಚಂದನ್ ಅವರು ಮಗದೊಂದು ಸಂತಸದ ವಿಚಾರವನ್ನು ನೀಡಿದ್ದಾರೆ. ತಮ್ಮ ಅಭಿನಯದ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಾಯಕನಾಗಿ ಮಿಂಚುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಚಂದನ್ ಶೆಟ್ಟಿ. ಮಾತ್ರವಲ್ಲ ಈ ಸಿನಿಮಾವು ಇದೇ ವಿಜಯ ದಶಮಿ ಹಬ್ಬದಂದು ಸೆಟ್ಟೇರಲಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹಾಡುಗಳ ಬಿಡುಗಡೆ, ಜೊತೆಗೆ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಇನ್ನಿತರ ಸಮಾರಂಭಗಳನ್ನು ಅದ್ದೂರಿಯಾಗಿ ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುವ ನವರಸನ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದು ಅದರಲ್ಲಿ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಲಿದ್ದಾರೆ ಚಂದನ್ ಶೆಟ್ಟಿ. ಇದರ ಜೊತೆಗೆ ನವರಸನ್ ಅವರು ಈ ಸಿನಿಮಾದಲ್ಲಿ ಕ್ರಿಯೇಟಿವ್ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಕಿರಣ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾ ಸಂಪೂರ್ಣ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಇದು ಅವರ ನಿರ್ದೇಶನದ ಮೊದಲ ಚಿತ್ರವೂ ಹೌದು.

ಚಂದನ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಕೇವಲ ನಾಯಕ ಆಗಿ ನಟಿಸುವುದಲ್ಲದೇ ಸಂಗೀತವನ್ನೂ ಸಂಯೋಜಿಸಲಿರುವುದು ವಿಶೇಷ. ಇನ್ನು ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ ಈ ಸಿನಿಮಾಕ್ಕಿರಲಿದ್ದು, ತಬಲ ನಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ