ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಸೆಲೆಬ್ರಿಟಿಗಳು ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ಹಂಚಿಕೊಂಡ ಈ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಸೆಲೆಬ್ರಿಟಿ ಯಾರೆಂದು ಗುರುತು ಹಿಡಿಯಬಲ್ಲಿರಾ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಸಾಲಿಗೆ ಇದೀಗ ಹೊಸ ಚಿತ್ರವೊಂದು ಸೇರಿಕೊಂಡಿದೆ. ಕನ್ನಡದ ಹೆಸರಾಂತ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬಾಲ್ಯದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋದ ಜೊತೆ ರಕ್ಷಿತ್ ಶೆಟ್ಟಿ ‘ರೀ ವಿಸಿಟಿಂಗ್ ಚೈಲ್ಡ್ ಹುಡ್’ ಎಂದು ಬರೆದಿದ್ದಾರೆ.

ಸದ್ಯ 777 ಚಾರ್ಲಿ ಚಿತ್ರದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ‘ಸಪ್ತ ಸಾಗರದಾಚೆಯೆಲ್ಲೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ತಾವೇ ನಟಿಸಲಿರುವ ರಿಚರ್ಡ್ ಆಂಟನಿ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ.

‘ಉಳಿದವರು ಕಂಡಂತೆ’ ಸಿನಿಮಾ ನಿರ್ದೇಶಿಸಿ ಗೆದ್ದಿದ್ದ ರಕ್ಷಿತ್ ಶೆಟ್ಟಿ ಇದೀಗ ಅದರ ಮುಂದುವರೆದ ಭಾಗಕ್ಕೆ ರಿಚರ್ಡ್ ಆಂಟನಿ ಎಂದು ಶೀರ್ಷಿಕೆಯನ್ನು ಇಟ್ಟಿದ್ದಾರೆ. ರಿಚರ್ಡ್ ಆಂಟನಿ ಚಿತ್ರಕ್ಕೆ ಕನ್ನಡದ ಪ್ರಸ್ತುತ ಅತಿದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಲಿದೆ.

2010ರಲ್ಲಿ ಬಿಡುಗಡೆಗೊಂಡ ನಮ್ ಏರಿಯಾಲ್ ಒಂದ್ ದಿನ ಚಿತ್ರದ ಮೂಲಕ ನಾಯಕ ನಟನಾಗಿ ಸಿನಿ ಜೀವನ ಆರಂಭಿಸಿದ ರಕ್ಷಿತ್ ಶೆಟ್ಟಿ 2014ರಲ್ಲಿ ಉಳಿದವರು ಕಂಡಂತೆ ಎಂಬ ಚಿತ್ರವನ್ನು ನಿರ್ದೇಶಿಸಿ ತಾನೊಬ್ಬ ಟ್ಯಾಲೆಂಟೆಡ್ ಡೈರೆಕ್ಟರ್ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿಯ ರಕ್ಷಿತ್ ಶೆಟ್ಟಿ ನಿರ್ದೇಶಿಸಿರುವ ಚಿತ್ರ ಇದೊಂದೇ ಆಗಿದೆ. ಅವರ ಮುಂದಿನ ನಿರ್ದೇಶನದ ರಿಚರ್ಡ್ ಆಂಟನಿ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿದೆ.

ಇನ್ನು 2013ರಲ್ಲಿ ಬಿಡುಗಡೆಗೊಂಡ ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನೆಮಾ ಮೂಲಕ ತಿರುವನ್ನು ಪಡೆದ ರಕ್ಷಿತ್ ಶೆಟ್ಟಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದರು. 2016ರಲ್ಲಿ ಬಿಡುಗಡೆಯಾದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಿರ್ಮಾಣವನ್ನು ಆರಂಭಿಸಿದ ರಕ್ಷಿತ್ ಶೆಟ್ಟಿ ಸದ್ಯ ತಮ್ಮದೇ ಸ್ವಂತ ಬ್ಯಾನರ್‌ನಲ್ಲಿ ಏಕಾಂಗಿಯಾಗಿ ಸಿನೆಮಾ ನಿರ್ಮಿಸುವಷ್ಟು ಬೆಳೆದು ನಿಂತಿದ್ದಾರೆ.

ಚಾರ್ಲಿ 777 ಸೇರಿದಂತೆ ಈ ವರೆಗೆ 14 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಕನ್ನಡ ಚಲನಚಿತ್ರ ರಂಗದ ಸೆಲ್ಫ್ ಮೇಡ್ ಸರದಾರರಲ್ಲಿ ಒಬ್ಬರು. ಒಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಸದ್ಯ ಭರವಸೆಯ ನಟರಲ್ಲಿ ಒಬ್ಬರಾಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ