ಶ್ವೇತಾ ಶ್ರೀವಾತ್ಸವ್ ಸ್ಯಾಂಡಲ್‍ವುಡ್ ನೆಚ್ಚಿರುವ ನಟಿ. ಕನ್ನಡ ಸಿನಿಮಾ ಮಾತ್ರವಲ್ಲದೆ ದೂರದರ್ಶನದಲ್ಲೂ ಇವರು ಪ್ರಸಿದ್ಧರು. ದೂರದರ್ಶನದಲ್ಲಿ ಕಾಣಿಸಿಕೊಳ್ಳುವ ಮೊದಲು ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು ಶ್ವೇತಾ. ಟಿ.ಎನ್ ಸೀತಾರಾಮ್ ಅವರ ‘ಮನ್ವಂತರ’ದಲ್ಲಿನ ಪಾತ್ರಕ್ಕಾಗಿ ಜನಮನ್ನಣೆಯನ್ನು ಪಡೆದ ಶ್ವೇತಾ ನಂತರ ‘ಮುಖಾಮುಖಿ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

‘ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ ಚಿತ್ರ ಇವರ ಬದುಕಿಗೆ ದೊಡ್ಡ ತಿರುವನ್ನು ನೀಡಿತು. ಆ ಚಿತ್ರದಿಂದ ಖ್ಯಾತಿಗಳಿಸಿದ ನಂತರ ‘ಫೇರ್ & ಲವ್ಲಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿಗೆ ನೀಡುವ ಫಿಲ್ಮ್‍ಫೇರ್ ಸೌತ್ ಪ್ರಶಸ್ತಿಯನ್ನೂ ಗೆದ್ದುಕೊಂಡರು. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಿಂಪಲ್ ಹುಡುಗಿ, ಹುಟ್ಟುಹಬ್ಬದಂದು ತಮ್ಮ ಎನ್‍ಜಿಒ ಬಗ್ಗೆ ಖುಷಿಯಿಂದ ಹಂಚಿಕೊಂಡಿದ್ದಾರೆ ನಟಿ.

”ನನ್ನ ಜನ್ಮದಿನದಂದು, ನಾವು ಹೊಸ ಎನ್‍ಜಿಒ ಒಂದನ್ನು ಪ್ರಾರಂಭಿಸಿದ್ದೇವೆ. ‘ಕರ್ನಾಟಕ ಸಿಂಡಿಕೇಟ್ ಫೌಂಡೇಶನ್’ ಎಂಬ ವಿಶೇಷ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ. ನಾನು ಯಾವಾಗಲೂ ಸಮಾಜಕ್ಕೆ ಏನನ್ನಾದರೂ ನೀಡಲು ಬಯಸುತ್ತೇನೆ. ಸಣ್ಣ ರೀತಿಯಲ್ಲಿ ಆದರೂ ಸರಿಯೇ. ಯಾವುದೋ ಒಂದು ರೀತಿಯಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂಬುದು ನನ್ನ ಆಸೆ” ಎಂದಿದ್ದಾರೆ ಶ್ವೇತಾ ಶ್ರೀವಾತ್ಸವ್.

ಮುಂದುವರೆಸಿ, ”ಬಹಳ ಸಮಯದಿಂದ, ನಾನು ಅವಕಾಶಗಳಿಗಾಗಿ ಹುಡುಕುತ್ತಿದ್ದೆ ಮತ್ತು ಅನೇಕ ಸಾಮಾಜಿಕ ಚಟುವಟಿಕೆಗಳು/ಕಲ್ಯಾಣ ಚಟುವಟಿಕೆಗಳ ಭಾಗವಾಗಲು ನಾನು ಸವಲತ್ತು ಪಡೆದಿದ್ದೇನೆ. ಅಲ್ಲದೆ ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ ಎಂದು ನಾನು ಯೋಚಿಸುತ್ತಿದ್ದೇನೆ. ಅದೃಷ್ಟವಶಾತ್, ನಾನು ಅದ್ಭುತ ತಂಡವನ್ನು ಕಂಡುಕೊಂಡಿದ್ದೇನೆ. ಕೆಎಸ್‍ಎಪ್ ಎನ್‍ಜಿಓ 15 ವರ್ಷಗಳಿಂದ ವೃದ್ಧಾಶ್ರಮವನ್ನು ನಡೆಸುತ್ತಿರುವ ಶ್ರೀ ಸಾಯಿ ಚಾರಿಟಬಲ್ ಟ್ರಸ್ಟ್ ನೊಂದಿಗೂ ಸಂಬಂಧ ಹೊಂದಿದೆ. ಈಗ ವಿವಿಧ ವೃತ್ತಿಯಿಂದ ಬಂದಿರುವವರು ತಂಡದ ಸದಸ್ಯರಾಗಿದ್ದಾರೆ” ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ ”ನಿಮಗೂ ಸಮಾಜ ಸೇವೆ ಮಾಡಬೇಕು ಎಂದನಿಸಿದಲ್ಲಿ, ನಮ್ಮ ಜೊತೆ ಕೈಜೋಡಿಸಬಹುದು. ನಿಮ್ಮ ಆಶೀರ್ವಾದ ಇರಲಿ”ಎಂದಿದ್ದಾರೆ.
ಇನ್ನು ಇವರ ಹಿನ್ನೆಲೆಯನ್ನು ಗಮನಿಸುವುದಾದರೆ, ಶ್ವೇತಾ ಅವರು ಆರನೇ ತರಗತಿಯಲ್ಲಿದ್ದಾಗ 1997 ರ ಸುಮಾರಿಗೆ ಬಿ.ವಿ.ಕಾರಂತ್ ಅವರು ನಡೆಸಿದ ರಂಗಭೂಮಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ನಂತರ ಅವರು T.N ಸೀತಾರಾಮ್ ನಿರ್ದೇಶನದ ಧಾರಾವಾಹಿ ‘ಜ್ವಾಲಾಮುಖಿ’ಯಲ್ಲಿ ನಟಿಸಿದರು. ಸೀತಾರಾಮ್ ಅವರ ಮನ್ವಂತರದಲ್ಲಿ ನಟಿಸಿದ್ದಲ್ಲದೆ ಅನೇಕ ಟೆಲಿಫಿಲ್ಮ್ ಗಳಲ್ಲಿ ಮತ್ತು ಟೆಲಿಪ್ಲೇಗಳಲ್ಲಿ ಕಾಣಿಸಿಕೊಂಡರು.

ಮೂರು ವರ್ಷಗಳ ಕಾಲ ಮಗುವಿಗಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ, 2019 ರಲ್ಲಿ ರಹದಾರಿ ಚಿತ್ರಕ್ಕೆ ಸಹಿ ಹಾಕಿದರು. ಗಿರೀಶ್ ವೈರಮುಡಿ ನಿರ್ದೇಶನದ ಈ ಚಿತ್ರದಲ್ಲಿ ಶ್ವೇತಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ