ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ”ಮತ್ತೆ ಮಾಯಾಮೃಗ”ದಲ್ಲಿ ಡಾಕ್ಟರ್ ಮಹತಿಯಾಗಿ ನಟಿಸುತ್ತಿರುವ ನಿಕಿತಾ ದೊರ್ತೋಡಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯವರು. ಎಂಸಿಎ ಪದವೀಧರೆಯಾಗಿರುವ ನಿಕಿತಾ ಮನಸ್ಸು ಮಾಡಿದ್ದರೆ ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಕೆಲಸ ಸಿಗುತ್ತಿತ್ತು. ಎಸಿ ರೂಮ್ ನಲ್ಲಿ ಕುಳಿತು ವಾರದ ಐದು ದಿನ ಕೆಲಸ ಮಾಡಿ ಉಳಿದ ವಿಕೇಂಡ್ ಅನ್ನು ಮಸ್ತ್ ಮಜಾ ಮಾಡುತ್ತಾ ಕಳೆಯಬಹುದಿತ್ತು. ಇದರ ಬದಲಿಗೆ ನಿಕಿತಾ ಆಯ್ಕುಕೊಂಡಿದ್ದು ನಟನೆಯನ್ನು! ಹೌದು, ತನ್ನ ಬದುಕನ್ನು ರೂಪಿಸಿಕೊಳ್ಳಲು ದಕ್ಷಿಣಕನ್ನಡದ ಬೆಡಗಿ ನಿಕಿತಾ ಬಣ್ಣದ ಲೋಕವನ್ನು ಆರಿಸಿಕೊಂಡರು.

ಸಣ್ಣ ವಯಸ್ಸಿನಿಂದಲೂ ನಟನೆಯತ್ತ ವಿಶೇಷ ಒಲವು ಆಸಕ್ತಿ ಹೊಂದಿದ್ದ ನಿಕಿತಾ ನಟನಾ ಕ್ಷೇತ್ರಕ್ಕೆ ಕಾಲಿಡುವ ಆಲೋಚನೆ ಮಾಡಿದರು. ಅದ್ಯಾವಾಗ ನಟಿಯಾಗಬೇಕು ಎಂಬ ಹಂಬಲ ಜಾಸ್ತಿಯಾಯಿತೋ ಆ ಕೂಡಲೇ ನಿಕಿತಾ ಅವರ ರಂಗಭೂಮಿಯ ಕಡೆಗೆ ಮುಖ ಮಾಡಿದರು. ಪ್ರತಿಷ್ಠಿತ ನಾಟಕ ತಂಡ ಸಮಷ್ಟಿ ಸೇರಿದ ಆಕೆ ಕಳೆದ 3 ವರ್ಷದಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು ಒಂದಷ್ಟು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ನಾಟಕ ತಂಡಗಳಲ್ಲಿ ಸಕ್ರಿಯರಾಗಿದ್ದಾಗಲೇ ಕಿರುತೆರೆಯತ್ತ ಮುಖ ಮಾಡಿದ ನಿಕಿತಾ ಆಡಿಶನ್ ಗಳಿಗೆ ಹೋಗಲು ಆರಂಭಿಸಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ನಿಕಿತಾ ಅದರಲ್ಲಿ ಸುಂದರನ ಪ್ರೇಯಸಿ ಟೀನಾ ಪಾತ್ರಕ್ಕೆ ಜೀವ ತುಂಬಿದರು.

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಿಣಿರಾಮ’ ಧಾರಾವಾಹಿಯಲ್ಲಿ ಇಂಗ್ಲೀಷ್ ಟೀಚರ್ ‘ಮಾಳವಿಕಾ’ ಆಗಿ ಕಾಣಿಸಿಕೊಂಡಿರುವ ನಿಕಿತಾ ಪ್ರಸ್ತುತ ಸಿರಿ ಕನ್ನಡ ವಾಹಿನಿಯ ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಮಹತಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

“ನಾನು ಮೊದಲಿಗೆ ಟಿ. ಎನ್. ಸೀತಾರಾಮ್ ಸರ್, ಪಿ.ಶೇಷಾದ್ರಿ ಸರ್ ಹಾಗೂ ನಾಗೇಂದ್ರ ಶಾ ಸರ್ ಇವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಬಯಸುತ್ತೇನೆ. ಜೊತೆಗೆ ಇಂತಹ ಒಳ್ಳೆಯ ಅವಕಾಶ ನೀಡಿದ ಸಿರಿಕನ್ನಡ ಚಾನೆಲ್ ಗೂ ನನ್ನ ಕಡೆಯಿಂದ ಧನ್ಯವಾದಗಳು” ಎಂದಿದ್ದಾರೆ. ನಟಿಸುವ ಅವಕಾಶ ಸಿಕ್ಕಿದ್ದು ಕೂಡಾ ಖುಷಿ ತಂದಿದೆ” ಎನ್ನುತ್ತಾರೆ.

“ಮಾಯಾಮೃಗ ಧಾರಾವಾಹಿಯ ಬಗ್ಗೆ ಗೊತ್ತಿಲ್ಲದವರಾರು ಹೇಳಿ? ಆಗಿನ ಕಾಲದಲ್ಲಿ ಕಿರುತೆರೆ ಜಗತ್ತಿನಲ್ಲಿ ಒಂದು ಇತಿಹಾಸ ನಿರ್ಮಾಣ ಮಾಡಿದ ಧಾರಾವಾಹಿ ಮಾಯಾಮೃಗ. ಧಾರಾವಾಹಿ ಕೊನೆಗೊಂಡು ಬರೋಬ್ಬರಿ 24 ವರ್ಷ ಆದರೂ ಜನ ಕಥೆಯನ್ನು ಪಾತ್ರವನ್ನು ಮರೆತಿಲ್ಲ. ಮಾಯಾಮೃಗ ಧಾರಾವಾಹಿ ಅದರದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದ್ದು ಈಗಲೂ ಅವರಿಗೆ ಮಾಯಾಮೃಗ ಹೆಸರು ಕೇಳಿದ ಕೂಡಲೇ ಕಿವಿ ನಿಮಿರುತ್ತದೆ. ಈಗ ನಾನು ಆ ತಂಡದ, ಆ ಧಾರಾವಾಹಿಯ ಭಾಗವಾಗಿರುವುದು ಖುಷಿ ತಂದಿದೆ. ಮುಖ್ಯವಾಗಿ ಮೂರು ಜನ ಮಹಾನ್ ನಿರ್ದೇಶಕರ ಜೊತೆ, ಅವರ ಮಾರ್ಗದರ್ಶನದಲ್ಲಿ ನಟಿಸುವ ಅವಕಾಶ ದೊರಕಿದೆ. ನನ್ನ ಪಾಲಿಗೆ ಒಲಿದ ಅದೃಷ್ಟವಿದು” ಎನ್ನುತ್ತಾರೆ ನಿಕಿತಾ ದೊರ್ತೋಡಿ.

“ಮಹತಿಯ ಪಾತ್ರಕ್ಕೆ ಜೀವ ತುಂಬುವುದರ ಜೊತೆಗೆ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಯಾಮೃಗ ಧಾರಾವಾಹಿಯ ಎಲ್ಲಾ ಕಲಾವಿದರುಗಳು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗಾಗಿ ಈಗಲೂ ಜನರ ಮನಸ್ಸಿನಲ್ಲಿ ಆ ಪಾತ್ರಗಳು ಅಚ್ಚೊತ್ತಿಬಿಟ್ಟಿದೆ. ಈಗ ಮತ್ತೆ ಮಯಾಮೃಗ ಧಾರಾವಾಹಿ ಪ್ರಸಾರವಾಗುತ್ತಿದ್ದು ಜನರ ನಿರೀಕ್ಷೆಯೂ ಜಾಸ್ತಿಯಾಗುವುದು ಸಹಜ. ಹೊಸ ಕಲಾವಿದರುಗಳು ಯಾವ ರೀತಿಯಲ್ಲಿ ಹೊಸ ಪಾತ್ರಗಳಿಗೆ ಜೀವ ತುಂಬುತ್ತಾರೆ ಎಂಬ ಕುತೂಹಲ ಸಹಜವಾಗಿ ಸೀರಿಯಲ್ ಪ್ರಿಯರಲ್ಲಿ ಮೂಡುತ್ತದೆ. ವೀಕ್ಷಕರ ನಿರೀಕ್ಷೆಯನ್ನು ನಿಜ ಮಾಡುವುದೇ ನನಗಿರುವ ಗುರಿ. ಜೊತೆಗೆ ಮಹತಿಯ ಪಾತ್ರವನ್ನು ಜನ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬ ಕುತೂಹಲವೂ ನನಗಿದೆ” ಎಂದು ಹೇಳುತ್ತಾರೆ ನಿಕಿತಾ.

ಪವನ್ ಭಟ್ ನಿರ್ದೇಶನದ ‘ಕಟ್ಟಿಂಗ್ ಶಾಪ್’ ಎಂಬ ಹೊಸಬರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ನಿಕಿತಾ ಅಲ್ಲೂ ಸೈ ಎನಿಸಿಕೊಂಡಿದ್ದಾರೆ. ಮುಂದೆ ‘ಸೈಕಿಕ್’ ಎನ್ನುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಈಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ 19.20.21 ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಯಕ್ಷಗಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡದ ಚೆಲುವೆ
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಜ್ಜೆ ಹಾಕಿದ್ದಾರೆ. ಝರ್ಟಾನ್ ಮೇಕಪ್ ಸ್ಟುಡಿಯೋ ,ಎಂ.ಜೆ ಗಾಡ್ಜಿಯಸ್ ಮೇಕಪ್ ಸ್ಟುಡಿಯೋ ಮಾಡೆಲಿಂಗ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿರುವ ಈಕೆ ಪ್ರಕೃತಿ ಹೇರ್ ಆಯಿಲ್ , ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕಂಗೊಳಿಸಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ