ಭರತ್ ಜೆ ನಿರ್ದೇಶನದ ಹಾರರ್ ಸಿನಿಮಾ “ಸ್ಪೂಕಿ ಕಾಲೇಜು” ಚಿತ್ರೀಕರಣ ಮುಕ್ತಾಯಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಟೀಸರ್ ಕೂಡಾ ಈಗಾಗಲೇ ಬಿಡುಗಡೆಗೊಂಡಿದ್ದು ಹಾರರ್ ಪ್ರಿಯರ ಮನ ಸೆಳೆದು ಬಿಟ್ಟಿದೆ. ಇದೇ ಬರುವ ನವೆಂಬರ್ 15 ರಂದು ಸಿನಿಮಾ ಬಿಡುಗಡೆಯಾಗಲಿದ್ದು ಅದರಲ್ಲಿ ನಾಯಕ ಆಗಿ ವಿವೇಕ್ ಸಿಂಹ ಅಭಿನಯಿಸಿದ್ದಾರೆ.

ಸ್ಪೂಕಿ ಕಾಲೇಜು ಮೂಲಕ ಸಿನಿಮಾ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಲು ತಯಾರಾಗಿರುವ ವಿವೇಕ್ ಸಿಂಹ ಬಣ್ಣದ ಪಯಣ ಶುರುವಾಗಿದ್ದು ಕಿರುತೆರೆಯಿಂದ ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಲರ್ಸ್ ಕನ್ನಡ ವಾಹಿನಿಯ ಸೌಭಾಗ್ಯವತಿ ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ಹ್ಯಾಂಡ್ ಸಮ್ ಹುಡುಗ ವಿವೇಕ್ ಸಿಂಹ ಮೊದಲ ಬಾರಿ ನಾಯಕರಾಗಿ ಮೋಡಿ ಮಾಡಿದ್ದು ಜನುಮದ ಜೋಡಿ ಧಾರಾವಾಹಿಯಲ್ಲಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನುಮದ ಜೋಡಿ ಧಾರಾವಾಹಿಯ ನಂತರ ಅದೇ ವಾಹಿನಿಯ ಮಹಾದೇವಿ ಧಾರಾವಾಹಿಯಲ್ಲಿ ಬಣ್ಣ ಹಚ್ಚುಚ ಅವಕಾಶ ಪಡೆದುಕೊಂಡಿದ್ದ ವಿವೇಕ್ ಸಿಂಹ ಅದರಲ್ಲಿ ಸೂರ್ಯ ಎಂಬ ರಗಡ್ ಹುಡುಗನಾಗಿ ನಟಿಸಿದ್ದಲ್ಲದೇ ಸೀರಿಯಲ್ ಪ್ರಿಯರ ಮನವನ್ನು ಕೂಡಾ ಸೆಳೆದು ಬಿಟ್ಟಿದ್ದರು. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮತ್ತೆ ವಸಂತ ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ಬದಲಾದ ವಿವೇಕ್ ಅವರಿಗೆ ಆ ಪಾತ್ರ ಜನಪ್ರಿಯತೆ ನೀಡಿತ್ತು.

ಮುಂದೆ ಸಿನಿಮಾದಲ್ಲಿ ನಟಿಸುವ ಸಲುವಾಗಿ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ವಿವೇಕ್ ಸಿಂಹ ಸದ್ಯ ಹಿರಿತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಇನ್ನು ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೈ ಎನಿಸಿಕೊಂಡಿದ್ದ ವಿವೇಕ್ ಸಿಂಹ ಕೇವಲ ನಾಟಕಗಳನ್ನು ಮಾತ್ರವಲ್ಲದೇ ವೀರಗಾಸೆ ಮತ್ತು ಡೊಳ್ಳು ಕುಣಿತಗಳನ್ನು ಮಾಡುತ್ತಿದ್ದರು.

ರಾಜುಗುರು ಹೊಸಕೋಟೆ ಅವರ ಬಳಿ ನಟನೆಯ ಆಳ ಅಗಲ ತಿಳಿದುಕೊಂಡ ಅಭಿನಯದ ರೀತಿ ನೀತಿಗಳನ್ನು ತಿಳಿದುಕೊಂಡರು. ಮುಂದೆ ರಂಗಾಯಣ ಸೇರಿದ ವಿವೇಕ್ ಸಿಂಹ ನಟನೆಯ ಕುರಿತು ಮತ್ತಷ್ಟು ವಿಚಾರಗಳನ್ನು ಅರಿತುಕೊಂಡರು.

ಮಹಾದೇವಿ ಧಾರಾವಾಹಿಯ ನಂತರ ಹಿರಿತೆರೆಗೆ ಪಾದಾರ್ಪಣೆ ಮಾಡಿದ ವಿವೇಕ್ ಸಿಂಹ ಶ್ರುತಿ ನಾಯ್ಡು ನಿರ್ದೇಶನದ ಪ್ರೀಮಿಯರ್ ಪದ್ಮಿನಿ ಧಾರಾವಾಹಿಯಲ್ಲಿ ನವರಸ ನಾಯಕ ಜಗ್ಗೇಶ್ ಮಗನಾಗಿ ಅಭಿನಯಿಸಿದ್ದರು. ಜೊತೆಗೆ ಮೊದಲ ಬಾರಿ ಹಿರಿತೆರೆಯಲ್ಲಿ ನಟಿಸಿದ್ದರೂ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆದರು.

ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ವಿವೇಕದ ಸಿಂಹ “ಮೊದಲಿನಿಂದಲೂ ನನಗೆ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮಹಾದಾಸೆಯಿತ್ತು. ಇಂದು ಅದು ನೆರವೇರಿದೆ. ಅಂದ ಹಾಗೇ ಅಭಿನಯ ಎನ್ನುವುದು ಇಂದ ನಾಳೆಯಲ್ಲಿ ಕಲಿತು ಬರುವಂತಹುದಲ್ಲ. ಬದಲಿಗೆ ಈ ಕ್ಷೇತ್ರದಲ್ಲಿ ಪ್ರತಿನಿತ್ಯವೂ ಕಲಿಯಲು ಇರುತ್ತದೆ” ಎಂದು ಹೇಳುತ್ತಾರೆ ವಿವೇಕ್ ಸಿಂಹ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ