ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಆಗಿ ಅಭಿನಯಿಸುತ್ತಿರುವ ಸಂಜನಾ ಬುರ್ಲಿ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದ ಚೆಲುವೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಳ್ಳಿಯ ಹುಡುಗಿಯಾಗಿ ನಟಿಸಿರುವ ಸಂಜನಾ ಬುರ್ಲಿ ಖಡಕ್ ಮಾತಿನ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ನೇಹಾ ಪಾತ್ರದ ಬಗ್ಗೆ ಮಾತನಾಡಿರುವ ಸಂಜನಾ ” ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬುವುದು ಸುಲಭವಲ್ಲ. ನನ್ನ ಪಾಲಿಗಂತೂ ಇದು ಕಠಿಣ ಸವಾಲೇ ಆಗಿತ್ತು. ಒಂದರ್ಥದಲ್ಲಿ ಹೇಳಬೇಕೆಂದರೆ ನಾನು ಈ ಧಾರಾವಾಹಿಯಲ್ಲಿ ಡಿ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನು ಸ್ನೇಹ ಪಾತ್ರಕ್ಕಾಗಿ ನಾನು ಒಂದು ವಾರಗಳ ಕಾಲ ತರಬೇತಿಯನ್ನು ಕೂಡಾ ಪಡೆದಿದ್ದೇನೆ. ಮುಖ್ಯವಾಗಿ ದನಿಯ ಏರಿಳಿತದ ಬಗ್ಗೆಯೂ ವಿಶೇಷ ಗಮನ ಹರಿಸಿದ್ದೇನೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದು ನಾನು ತುಂಬಾ ಶ್ರಮ ಹಾಕಿ ನಟಿಸಿದ ಪಾತ್ರ” ಎಂದು ಹೇಳುತ್ತಾರೆ ಸಂಜನಾ ಬುರ್ಲಿ.
ಲಗ್ನಪತ್ರಿಕೆ ಧಾರಾವಾಹಿಯ ಮಯೂರಿ ಆಗಿ ಕಿರುತೆರೆಗೆ ಕಾಲಿಟ್ಟ ಸಂಜನಾ ಬುರ್ಲಿ ಬಣ್ಣದ ಪಯಣ ಶುರುವಾಗಿದ್ದು ಹಿರಿತೆರೆಯಿಂದ. ವೀಕೆಂಡ್ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ರಾಧಾ ಮಿಸ್ಸಿಂಗ್ ರಮಣ ಸರ್ಚಿಂಗ್ ಸಿನಿಮಾದಲ್ಲಿಯೂ ಈಕೆ ನಟಿಸಿದ್ದು ಈಗ ‘ನಾನ್ ವೆಜ್’ ಎನ್ನುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಅವರು ಮ್ಯಾನ್ ಆಫ್ ದಿ ಮ್ಯಾಚ್ ನಟ ಅಥರ್ವ ಪ್ರಕಾಶ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿದ ಸಂಜನಾ ಸಂಜನಾ “ನಾನು ಮಹತ್ವಾಕಾಂಕ್ಷೆಯ ಫ್ಯಾಷನ್ ಡಿಸೈನರ್ ಪಾತ್ರವನ್ನು ನಿರ್ವಹಿಸುತ್ತೇನೆ. ಪ್ರೀತಿಯು ಯಾರ ಜೀವನವನ್ನೂ ಬೇಕಾದರೂ ಬದಲಾಯಿಸಬಹುದು ಎಂದು ನಂಬಿರುವವಳು ಆಕೆ. ಆದರೆ ಅವಳು ನಾಯಕನನ್ನು ಭೇಟಿಯಾದಾಗ, ಅದು ದೋಷಗಳ ಹಾಸ್ಯಕ್ಕೆ ಕಾರಣವಾಗುತ್ತದೆ” ಎಂದರು. ರಕ್ಷಿತ್ ಜೊತೆ ಸಂಬಂಧ ಹೊಂದಿರುವ ಅರುಣ್ ಲೂಯಿಸ್ ಶೆಟ್ಟಿ ತಂಡ ಕಥೆ, ಚಿತ್ರಕಥೆ ಬರೆದಿದ್ದಾರೆ.
