ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ಮಹಾದೇವಿಯಲ್ಲಿ ದೇವಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಮಾನಸ ಜೋಶಿ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಮಾನಸ ಜೋಶಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಪುಟ್ಟ ಕಂದನ ಆಗಮನದ ನಿರೀಕ್ಷೆಯಲ್ಲಿರುವ ಮಾನಸ ಜೋಶಿ ಇದೀಗ ಸಮಾಜಮುಖಿ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.

ಗರ್ಭಣಿಯಾಗಿರುವ ಮಾನಸ ಜೋಶಿ ತಮ್ಮ ಉದ್ದನೆಯ ಕೂದಲನ್ನು ದಾನ ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿ ಮಾಡುವ ಸಂಸ್ಥೆಗೆ ತಮ್ಮ ಕೂದಲನ್ನು ನೀಡಿದ್ದಾರೆ ಮಾನಸ. ಕೂದಲು ಕತ್ತರಿಸಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾನಸ ಜೋಶಿ “ಈ ಪೋಸ್ಟ್ ನನ್ನ ಪಾಲಿಗೆ ತುಂಬಾ ವಿಶೇಷ. ಜೊತೆಗೆ ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಯಾಕೆಂದರೆ ನಾನು ಹತ್ತು ವರ್ಷಗಳಿಂದ ಕೂದಲನ್ನು ದಾನ ಮಾಡಬೇಕೆಂದು ಯೋಚಿಸುತ್ತಿದ್ದೆ. ಕೊನೆಗೂ ಆ ದಿನ ಬಂದು ಬಿಟ್ಟಿತ್ತು” ಎಂದು ಬರೆದುಕೊಂಡಿದ್ದಾರೆ ಮಾನಸ ಜೋಶಿ. ಮಾನಸ ಜೋಶಿ ಅವರ ನಿರ್ಧಾರ ಅನೇಕರಿಗೆ ಸ್ಪೂರ್ತಿ ನೀಡಿದೆ. ಇದರ ಜೊತೆಗೆ ನೆಟ್ಟಿಗರು ಹಾಗೂ ಸ್ನೇಹಿತರು ಮಾನಸಾ ಅವರ ಮಹತ್ಕಾರ್ಯಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮಹಾದೇವಿ ಹಾಗೂ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿರುವ ಮಾನಸಾ ಜೋಶಿ ಬೆಳ್ಳಿತೆರೆಯಲ್ಲಿಯೂ ಮಿಂಚಿದ್ದಾರೆ. ಲಾಸ್ಟ್ ಬಸ್, ಅಮೃತ ಅಪಾರ್ಟ್‌ಮೆಂಟ್ಸ್, ಯಶೋಗಾಥೆ, ಹರಿವು, ಹಜ್, ಕಿರುಗೂರಿನ ಗಯ್ಯಾಳಿಗಳು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

2015 ರ ಡಿಸೆಂಬರ್ ತಿಂಗಳಿನಲ್ಲಿ ಸಂಕರ್ಷಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಮಾನಸ ಜೋಶಿ ಮುದ್ದಿನ ಮಗಳ ನಿರೀಕ್ಷೆಯಲ್ಲಿದ್ದಾರೆ. ಪತಿಯೊಂದಿಗಿನ ಫೋಟೋ ಹಂಚಿಕೊಂಡಿರುವ ಮಾನಸಾ ಜೋಶಿ ಜೀವನದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದೇವೆ” ಎಂದು ಹೇಳಿಕೊಂಡಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ