ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ಲಹರಿಯಾಗಿ ನಟಿಸಿದ್ದ ಚಂದನಾ ಅನಂತಕೃಷ್ಣ ಪೋಷಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಾಕೆ. ಹೂಮಳೆ ಧಾರಾವಾಹಿಯ ನಂತರ ನಟನೆಯಿಂದ ದೂರವಿದ್ದ ಚಂದನಾ ಇದೀಗ ಎದುರಲ್ಲಿ ನೀನು ಇರುವಾಗ ಎನ್ನುವ ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಸೋಲ್ ಕ್ರಾಫ್ಟ್ ಫ್ಯಾಕ್ಟರಿ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ನಿನ್ನೆಯಷ್ಟೇ ಬಿಡುಗಡೆಯಾಗಿರುವ ಈ ಹಾಡು ಸಕತ್ ಸದ್ದು ಮಾಡುತ್ತಿದೆ.

ಮುದ್ದಾದ ನಟನೆಯ ಮೂಲಕ ಆಲ್ಬಂ ಸಾಂಗ್ ನಲ್ಲೂ ಮಿಂಚಿರುವ ಚಂದನಾ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದು. ಶಾಸ್ತ್ರೀಯ ಸಂಗೀತ, ನೃತ್ಯ ಹಾಗೂ ವೀಣೆಯನ್ನು ಅಭ್ಯಾಸಿಸಿರುವ ಈಕೆ ಇದರ ಹೊರತಾಗಿ ಏಕಪಾತ್ರಾಭಿನಯ, ನಾಟಕಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರತಿಭೆ.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವಿದ್ಯಾಭ್ಯಾಸ ಪೂರೈಸಿರುವ ಚಂದನಾ ಅನಂತಕೃಷ್ಣ ಅಲ್ಲಿನ ರಂಗಾಧ್ಯಯನ ಕೇಂದ್ರ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡಗಳಿಂದ ಆಕರ್ಷಿತಗೊಂಡರು. ಮಾತ್ರವಲ್ಲ ಕಲೆಯ ವಿವಿಧ ಪ್ರಕಾರಗಳಾದ ಕಥಕ್ ಹಾಗೂ ಮೋಹಿನಿ ಅಟ್ಟಂ ಕೂಡಾ ಕಲಿತರು.

ಪದವಿಯ ನಂತರ ನಟನೆಯತ್ತ ಮುಖ ಮಾಡಿದ ಚಂದನಾ ಮೊದಲ ಬಾರಿ ನಟಿಸಿದ್ದು ಪುಟ್ಮಲ್ಲಿ ಧಾರಾವಾಹಿಯಲ್ಲಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನಾ ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿ ಆಲಿಯಾಸ್ ಎಡವಟ್ಟು ರಾಣಿಯಾಗಿ ಕಾಣಿಸಿಕೊಂಡರು.

ಮುಂದೆ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಹೋಗಿದ್ದ ಈಕೆ 11 ವಾರಗಳ ಕಾಲ ಅಲ್ಲಿದ್ದು ವೀಕ್ಷಕರನ್ನು ರಂಜಿಸಿದರು. ಅಲ್ಲಿಂದ ಬಂದ ಬಳಿಕ ನಿರೂಪಕಿಯಾಗಿ ಭಡ್ತಿ ಪಡೆದ ಈಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಡು ಕರ್ನಾಟಕ ಕಾರ್ಯಕ್ರಮದ ನಿರೂಪಕಿಯಾಗಿ ಮೋಡಿ ಮಾಡಿದರು.

ನಂತರ ಹೂಮಳೆ ಧಾರಾವಾಹಿಯ ಲಹರಿಯಾಗಿ ಮೋಡಿ ಮಾಡಿದ ಚಂದನಾ ಮುಂದೆ ಡ್ಯಾನ್ಸ್ ಜ್ಯೂನಿಯರ್ಸ್ ರಿಯಾಲಿಟಿ ಶೋವಿನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ