ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೈದೇಹಿ ಪರಿಣಯ ಧಾರಾವಾಹಿಯಲ್ಲಿ ಸಿಯಾ ಆಗಿ ನಟಿಸುತ್ತಿರುವ ಚಂದನಾ ಮಹಾಲಿಂಗಯ್ಯ ಖಳನಾಯಕಿಯಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ಚೆಲುವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕಿಯ ಅಕ್ಕ ಅರ್ಥಾತ್ ಖಳನಾಯಕಿ ಅಂಕಿತಾ ಆಗಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಚಂದನಾ ನಟನೆಯ ಮೂಲಕ ಮನ ಸೆಳೆದ ಸುಂದರಿ.

ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಚಂದನಾ ಡ್ಯಾನ್ಸ್, ನಾಟಕಗಳಲ್ಲಿ ಅಭಿನಯಿಸಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಚಂದನಾ ಅವರಿಗೆ ನಟಿಯಾಗಬೇಕು, ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸಿತ್ತು. ಅದೇ ಕಾರಣದಿಂದ ನಾಗರಾಜ ಕೋಟೆಯವರ “ಬಣ್ಣ” ನಟನಾ ಶಾಲೆಗೆ ಸೇರಿದ ಚಂದನಾ ಆರು ತಿಂಗಳುಗಳ ಕಾಲ ನಟನೆಯ ಕುರಿತು ತರಬೇತಿ ಪಡೆದರು.

ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಕನ್ನಿಕೆಯಲ್ಲಿ ಇಂಚರಾ ಆಗಿ ಅಭಿನಯಿಸುವ ಮೂಲಕ ಕಿರುತೆರೆ ಜರ್ನಿ ಶುರು ಮಾಡಿದ ಚಂದನಾ ಮಹಾಲಿಂಗಯ್ಯ ನಟಿಸಿದ್ದು ನಾಲ್ಕು ಧಾರಾವಾಹಿಗಳಾದರೂ ಅಭಿನಯದ ಮೂಲಕ ವೀಕ್ಷಕರ ಮನ ಸೆಳೆದರು.

ಮುಂದೆ ಸೀತಾವಲ್ಲಭ ಧಾರಾವಾಹಿಯ ಅಂಕಿತಾ ಆಗಿ ಬದಲಾದ ಚಂದನಾ ನೆಗೆಟಿವ್ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾದರು. ಯಾವುದೇ ಪಾತ್ರ ನೀಡಿದರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಈಕೆ ಮುಂದೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವೈದೇಹಿ ಪರಿಣಯಂ ನಲ್ಲಿ ಸಿಯಾ ಆಗಿ ನಟಿಸುವ ಮೂಲಕ ಪರಭಾಷೆಯಲ್ಲೂ ಈಕೆ ಕಮಾಲ್ ಮಾಡಿದ್ದಾರೆ. ಇದೀಗ ಅದೇ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿದ್ದು, ಅದರ ಮೂಲಕ ವೀಕ್ಷಕರಿಗೆ ಮನರಂಜನೆಯ ಮಹಾಪೂರ ಉಣಬಡಿಸುತ್ತಿದ್ದಾರೆ.

ಇನ್ನು ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಅಣ್ಣನ ಮಗಳು ಪೂರ್ವಿ ಆಗಿ ನಟಿಸುತ್ತಿದ್ದ ಚಂದನಾ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಮುದ್ದಾದ ನಟನೆಯ ಮೂಲಕ ಮನಸೆಳೆದಿದ್ದ ಚಂದನಾ ಮಹಾಲಿಂಗಯ್ಯ ಮತ್ತೆ ಧಾರಾವಾಹಿಗೆ ಮರಳುತ್ತಾರಾ ಎಂಬ ವೀಕ್ಷಕರ ಪ್ರಶ್ನೆಗೆ ಇನ್ನು ಕೂಡಾ ಉತ್ತರ ಸಿಗಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ