ನಟನೆಯ ಜೊತೆಗೆ ನಿರೂಪಣಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಸದ್ಯ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹೌದು, ಕೊನೆಯ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಸೀಸನ್ 1 ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಅನುಪಮಾ ಗೌಡ ಆಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇನ್ನು ಯಾವುದೇ ಹೊಸ ಪ್ರಾಜೆಕ್ಡ್ ಗಳನ್ನು ಒಪ್ಪಿಕೊಂಡಿರದ ಅನುಪಮಾ ಗೌಡ ಈಗ ಸುದ್ದಿಯಲ್ಲಿದ್ದಾರೆ.

ಅಂದ ಹಾಗೇ ಅನುಪಮಾ ಗೌಡ ಸುದ್ದಿಯಲ್ಲಿರುವುದಕ್ಕೆ ಕಾರಣ ಅವರು ಇತ್ತೀಚೆಗಷ್ಟೇ ಖರೀದಿಸಿದ ಮಹೀಂದ್ರ ಥಾರ್ ಕಾರಣ. ಸುಮಾರು 17 ರಿಂದ 21 ಲಕ್ಷ ಬೆಲೆಬಾಳುವ ಕೆಂಪು ಬಣ್ಣದ ಥಾರ್ ನ ಒಡತಿಯಾಗಿರುವ ಅನುಪಮಾ ಗೌಡ ಈ ಸಂತಸದ ವಿಚಾರವನ್ನು ಸ್ವತಃ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಜೀವನದಲ್ಲಿ ಕಾರಿನ ಜೊತೆಗಿನ ಸಂಬಂಧವನ್ನು ಕೂಡಾ ಅವರು ತಿಳಿಸಿದ್ದಾರೆ.
ಅನುಪಮಾ ಗೌಡ ಅವರು ಮೊದಲು ತೆಗೆದ ವಾಹನ ಡಿಯೋ ಬೈಕ್. ಆದರೆ ಕಾರಣಾಂತರಗಳಿಂದ ಅದನ್ನು ಅವರ ಬಳಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಮತ್ತೆ ಮುಂದೆ 2014, ಆಗಸ್ಟ್ 16 ರಂದು ಹುಂಡೈ i10 ಕಾರನ್ನು ಖರೀದಿಸಿದ್ದರು. ಆದರೆ ಆ ಸಮಯದಲ್ಲಿ ಅನುಪಮಾಗೆ ಡ್ರೈವಿಂಗ್ ಬರುತ್ತಿರಲಿಲ್ಲ. ಮುಂದೆ ಹುಂಡೈ i10 ಕಾರಿನಿಂದಲೇ ಕಾರು ಓಡಿಸುವುದನ್ನು ಕಲಿತರು. ತದ ನಂತರ ನಿತ್ಯ ಶೂಟಿಂಗ್‌ಗೆ ಅದೇ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದರು. ಬಳಿಕ ಈ ಕಾರನ್ನು ತಮ್ಮ ಸ್ನೇಹಿತರಿಗೆ ಕೊಟ್ಟರು.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಆಕೆ ಕ್ರೇಟಾ ಕಾರನ್ನು ಬುಕ್ ಮಾಡಿದ್ದರು. ಕ್ರೇಟಾ ಕಾರು ಸಮಯಕ್ಕೆ ಸರಿಯಾಗಿ ಕೈ ಸೇರಲಿಲ್ಲ. ಬದಲಿಗೆ ಅವರ ತಂದೆ ತೀರಿಕೊಂಡ ಒಂದು ತಿಂಗಳ ಬಳಿಕ ಸಿಕ್ಕಿತ್ತು. ಈ ಕಾರನ್ನು ಅವರು ಬೇಡ ಎಂದಿದ್ದರು. ಆದರೆ ಆಗಲೇ ಒಂದು ತಿಂಗಳ ಇಎಂಐ ಕಟ್ಟಿದ್ದರಿಂದ ಕ್ರೇಟಾ ತೆಗೆದುಕೊಳ್ಳುವುದು ಅನುಪಮಾಗೆ ಅನಿವಾರ್ಯವಾಗಿತ್ತು.

ಇದೀಗ ಥಾರ್ ತೆಗೆದುಕೊಂಡಿರುವ ಅನುಪಮಾ ಗೌಡ ತಾವು ವಿಡಿಯೋ ಹಂಚಿಕೊಂಡಿರುವ ಉದ್ದೇಶವನ್ನು ಕೂಡಾ ಹೇಳಿದ್ದಾರೆ. ನಮ್ಮ ಕೈಯಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬ ದೃಢನಿರ್ಧಾರ ಇದ್ದರೆ ಎಲ್ಲವೂ ಸಾಧ್ಯ. ಅದಕ್ಕೆ ನಾನೇ ಉದಾಹರಣೆ. ನಾನು ಜೀರೋದಿಂದ ಜರ್ನಿ ಆರಂಭಿಸಿದವಳು. ಇದು ನನ್ನ ಮೂರನೇ ಕಾರು. ಹಾಗಾಗಿ ನಾನು ಈ ವಿಚಾರ ಹೇಳುತ್ತಿದ್ದೇನೆ. ಮೊದಲು ಜೀವನದಲ್ಲಿ ಒಂದಷ್ಟು ಕನಸುಗಳನ್ನು ಇಟ್ಟುಕೊಳ್ಳಿ.
ಕಾರು ತೆಗೆದುಕೊಳ್ಳುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತು. ಇನ್ನು ತೆಗೆದುಕೊಂಡ ನಂತರ ತಿಂಗಳು ತಿಂಗಳು EMI ಕಟ್ಟುವುದು ಕೂಡಾ ಸುಲಭದ ವಿಚಾರವಲ್ಲ. ಯಾರೇ ಆಗಲಿ ಮೊದಲು ಉಳಿತಾಯ ಮಾಡಿ. ಸಾಯುವುಷ್ಟರಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು’ ಎಂದಿದ್ದಾರೆ ಅನುಪಮಾ ಗೌಡ.