ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಸಾಲಿಗೆ ಸೇರಿರುವ ಸೇವಂತಿ ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸೇವಂತಿ ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿ ಮುನ್ನುಗುತ್ತಿರುವುದು ಕಂಡು ಸೇವಂತಿ ಪಾತ್ರಧಾರಿ ದೀಪಿಕಾ ಸಂತಸ ವ್ಯಕ್ತಪಡಿಸಿದ್ದಾರೆ.

“ನಾನು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸೇವಂತಿ ಧಾರಾವಾಹಿಯು ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ಸಾವಿರ ಸಂಚಿಕೆ ಪೂರೈಸಿರುವುದು ಸಣ್ಣ ವಿಚಾರವಲ್ಲ. ಸೀರಿಯಲ್ ಅನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ. ಅಂದ ಹಾಗೇ ನನ್ನ ಅಭಿನಯದ ಎರಡನೇ ಧಾರಾವಾಹಿ ಸಾವಿರ ಸಂಚಿಕೆ ಪೂರೈಸಿರುವುದು ನನಗೆ ಖುಷಿ ತಂದಿದೆ. ಇದಕ್ಕಿಂತ ಮೊದಲು ಕುಲವಧು ಧಾರಾವಾಹಿ 1500 ಸಂಚಿಕೆ ಪೂರೈಸಿತ್ತು” ಎಂದು ಖುಷಿಯಿಂದ ಹೇಳುತ್ತಾರೆ ದೀಪಿಕಾ.

ಪಾತ್ರದ ಬಗ್ಗೆ ಮಾತನಾಡಿರುವ ದೀಪಿಕಾ “ಸೇವಂತಿ ತುಂಬಾ ಒಳ್ಳೆಯ ಪಾತ್ರ. ಸೇವಂತಿ ಒಬ್ಬಳು ಮುಗ್ಧ ಮನಸ್ಸಿನ, ಎಲ್ಲರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಹುಡುಗಿ.. ಪಟಪಟನೆ ಮಾತನಾಡುವ ಆಕೆ ಸಂಬಂಧಗಳಿಗೆ ತುಂಬಾನೇ ಬೆಲೆ ಕೊಡುತ್ತಾಳೆ. ಜೊತೆಗೆ ಆಕೆ ತನ್ನ ಅಮ್ಮನಿಗಾಗಿ ಹಾತೊರೆಯುತ್ತಿರುವ ಹೆಣ್ಣು ಮಗಳು” ಎನ್ನುತ್ತಾರೆ ದೀಪಿಕಾ.

ಅಂದ ಹಾಗೇ ದೀಪಿಕಾ ಅವರು ನಟನೆಯ ಹೊರತಾಗಿ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತಿರುವ ಈಕೆ ಹತ್ತು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದೇಶನ ನೀಡಿದ್ದಾರೆ. ಮುಂದೆ ತನ್ನ ಸ್ನೇಹಿತೆಯ ಒತ್ತಾಯಕ್ಕೆ ಮಣಿದ ದೀಪಿಕಾ ಧಾರಾವಾಹಿಯ ಆಡಿಶನ್ ಗೆ ಹೋದರು. ನಟನೆಯ ಗಂಧ ಗಾಳಿ ತಿಳಿಯದ ದೀಪಿಕಾ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು! ಯಾಕೆಂದರೆ ಆಕೆ ಆಯ್ಕೆಯಾಗಿದ್ದು ನಾಯಕಿ ಪಾತ್ರಕ್ಕೆ.

ಧನ್ಯಾ ಆಗಿ ಕಿರುತೆರೆ ಪಯಣ ಶುರು ಮಾಡಿದ ದೀಪಿಕಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ! ಕುಲವಧು ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ನಾಯಕಿ ಆರತಿಯಾಗಿ ನಟಿಸಿದ ದೀಪಿಕಾ ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ಮಿಂಚುತ್ತಿದ್ದಾರೆ.

ಜೊತೆಗೆ “ಇಂಟಿಕಿ ದೀಪಂ ಇಲ್ಲಾಲು” ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕಿ ಕೃಷ್ಣಪ್ರಿಯಾ ಅಭಿನಯಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಈಕೆ ಚಿಟ್ಟೆ, ನನ್ ಮಗಳೇ ಹೀರೋಯಿನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗಿನ ಇಟ್ಲು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿರುವ ಈಕೆ “ನನ್ನ ವೃತ್ತಿ ಜೀವನದಲ್ಲಿ ಹೊಸದಾದ ಮೈಲಿಗಲ್ಲು ಸೃಷ್ಟಿ ಮಾಡಿದ್ದು ಧನ್ಯಾ ಪಾತ್ರ. ಇಂದು ನಾನು ಬಣ್ಣದ ಬದುಕಿನಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಧನ್ಯಾ ಪಾತ್ರವೇ ಮೂಲ ಕಾರಣ” ಎಂದು ಸಂತಸದಿಂದ ಹೇಳುತ್ತಾರೆ ದೀಪಿಕಾ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ