ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯನ ತಂಗಿ ಅದಿತಿಯಾಗಿ ಅಭಿನಯಿಸಿದ್ದ ಕಾವ್ಯ ರಮೇಶ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಎಳವೆಯಿಂದಲೂ ನಟಿಯಾಗಬೇಕು, ನಟನಾ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಕನಸು ಕಂಡಿದ್ದ ವಿಜಯನಗರದ ಚೆಲುವೆ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ತದ ನಂತರ ನಟನಾ ಲೋಕದತ್ತ ಚಿತ್ತ ಹರಿಸಿದ ಕಾವ್ಯ ರಮೇಶ್ ಆಡಿಶನ್ ಗಳನ್ನು ಅಟೆಂಡ್ ಮಾಡುವ ನಿರ್ಧಾರ ಮಾಡಿದರು. ಮೊದಲ ಆಡಿಶನ್ ನಲ್ಲಿಯೇ ಆಯ್ಕೆಯಾದಾಗ ಕಾವ್ಯ ರಮೇಶ್ ಅವರಿಗೆ ಆದ ಸಂತಸ ಅಷ್ಟಿಷ್ಟಲ್ಲ.
ಸೀತಾವಲ್ಲಭ ಧಾರಾವಾಹಿಯಲ್ಲಿ ಅದಿತಿ ಎನ್ನುವ ಪೋಷಕ ಪಾತ್ರದಲ್ಲಿ ಕಾವ್ಯ ರಮೇಶ್ ಕಾಣಿಸಿಕೊಂಡಿದ್ದರೂ ಎರಡು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು.

ಕಾವ್ಯ ರಮೇಶ್ ಅವರು ಅಭಿನಯಿಸಿದ್ದು ಕೇವಲ ಒಂದೇ ಧಾರಾವಾಹಿ ನಿಜ, ಆದರೆ ಅವರ ನಟನೆ, ಪಾತ್ರ ವೀಕ್ಷಕರ ಮನ ಸೆಳೆದುಬಿಟ್ಟಿತ್ತು. ಸೀತಾವಲ್ಲಭ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಈಕೆ ಚೌಕಾಬಾರ ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು. ಚೌಕಾಬಾರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾವ್ಯ ರಮೇಶ್ ನಟಿಸಿದ್ದು ಅದು ಇನ್ನು ಬಿಡುಗಡೆಯಾಗಬೇಕಿದೆ.
ಗುಳ್ಟು ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅವರ ಜೊತೆ ಕಾವ್ಯ ರಮೇಶ್ ತೆರೆ ಹಂಚಿಕೊಂಡಿದ್ದು ಅಲ್ಲಿಯೂ ಆಕೆ ಎರಡನೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಇನ್ನು ಕೂಡಾ ಸಿನಿಮಾದ ಹೆಸರು ರಿವೀಲ್ ಆಗಬೇಕಿದೆ.

ಇದರ ಜೊತೆಗೆ ನೋಡದ ಪುಟಗಳು ಸಿನಿಮಾದಲ್ಲಿ ಕಾವ್ಯ ರಮೇಶ್ ಅವರು ಬಣ್ಣ ಹಚ್ಚಿದ್ದು ಅದರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದೆ. ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಕಾವ್ಯ ರಮೇಶ್ ತೆಲುಗಿನ “ನಚ್ಚಿನಾವುಡು” ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಆರ್.ಸಿ.ಪುರಂ ಎನ್ನುವ ತೆಲುಗು ಸಿನಿಮಾದಲ್ಲಿಯೂ ಇವರು ಅಭಿನಯಿಸಿದ್ದು ಅದರ ಮೊದಲ ಹಂತದ ಚಿತ್ರೀಕರಣವೂ ಮುಕ್ತಾಯಗೊಂಡಿದೆ.

ಒಟ್ಟಿನಲ್ಲಿ ಬೆಳ್ಳಿತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಕಾವ್ಯ ರಮೇಶ್ ಮತ್ತೆ ಕಿರುತೆರೆಗೆ ಮರಳಿ ಬರುತ್ತಾರಾ, ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಾರಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ