ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಟಿ ಸಂಜನಾ ಗಲ್ರಾನಿ ಶಾಶ್ವತ ಬೋಳುತನದಿಂದ (ಅಲೋಪೆಸಿಯಾ) ಬಳಲುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಉತ್ತಮ ಕೆಲಸವನ್ನು ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು ”ಪ್ರತಿ ಜನ್ಮದಿನದಂದು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ಭಾವಿಸುತ್ತೇನೆ. ಈ ವರ್ಷ ಕ್ಯಾನ್ಸರ್ ರೋಗಿಗಳಿಗೆ ನನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಿದೆ. ಸಮಾಜದ ನಡುವೆ ನಾವು ಬದುಕುತ್ತಿರುವಾಗ ಈ ತರಹದ ಕೆಲಸಗಳನ್ನು ಮಾಡಿದರೆ ಅದು ಇತರರನ್ನೂ ಪ್ರೇರೇಪಿಸುತ್ತದೆ” ಎಂದರು.

”ನಾನು 12 ಇಂಚು ಉದ್ದದ ಕೂದಲನ್ನು ನೀಡಿದ್ದೇನೆ. ಇದನ್ನು ಅಲೋಪೆಸಿಯಾದಿಂದ ಬಳಲುತ್ತಿರುವ ವ್ಯಕ್ತಿಗೆ ಹಸ್ತಾಂತರಿಸಲಾಗುವುದು. ಅಲೋಪೇಸಿಯಾದಿಂದ ಬಳಲುತ್ತಿರುವವನು ಕಾಯಿಲೆ ಮಾತ್ರವಲ್ಲದೆ ಮಾನಸಿಕ ಖಿನ್ನತೆಯೊಂದಿಗೂ ಹೋರಾಡುತ್ತಾನೆ.
ಇದು ಕಠಿಣ ಸಮಯದಲ್ಲಿ ಅವರ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯವಾಗಲಿದೆ. ಈಗ ನಾನು ಆರಂಭಿಸಿರುವ ಕೆಲಸ ಇಲ್ಲಿಗೆ ನಿಲ್ಲದೆ ನಿರಂತರವಾಗಿ ಸಾಗಲಿದೆ. ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಸಂಖ್ಯೆಯ ವಿಗ್‌ಗಳು ತಲುಪುವಂತಾಗಬೇಕು” ಎಂದರು.

ಮುಂದುವರೆಸಿ “ನನ್ನ ಶಾಲಾ ದಿನಗಳ ನಂತರ, ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಕೂದಲನ್ನು ಇಷ್ಟು ಸಣ್ಣಕ್ಕೆ ತೆಗೆಸಿದ್ದೇನೆ. ನಾನು ತೋರಿಸಲು ಬಯಸುತ್ತಿದ್ದ ಉದ್ದನೆಯ ಕೂದಲನ್ನು ನಾನೀಗ ಹೊಂದಿಲ್ಲ” ಎಂದು ನಗುತ್ತಾರೆ. ವೃತ್ತಿಜೀವನದ ಜೊತೆಗೆ ಮಗುವನ್ನೂ ಹೊಂದಿರುವ ನಟಿ ಸಂಪೂರ್ಣವಾಗಿ ತಾಯ್ತನವನ್ನು ಆನಂದಿಸುತ್ತಿದ್ದಾರೆ.

ಇನ್ನು ತೆಲುಗು ಚಿತ್ರ ಮಣಿಶಂಕರ್ ಬಿಡುಗಡೆಗೆ ಸಿದ್ಧವಾಗಿದೆ. “ಸದ್ಯ, ನನ್ನ ಜೀವನದಲ್ಲಿ ಈ ಹಂತದಲ್ಲಿರವುದಕ್ಕೆ ಖುಷಿಯಲ್ಲಿದ್ದೇನೆ. ನಾನು ವಿಭಿನ್ನ ಪಾತ್ರಗಳನ್ನು ಹುಡುಕುತ್ತಿದ್ದೇನೆ, ನನ್ನ ನಿರೀಕ್ಷೆಗಳನ್ನು ಪೂರೈಸುವಂತಹ ಪಾತ್ರಗಳು ಸಿಕ್ಕಿದಲ್ಲಿ ನಾನು ಒಪ್ಪಿಕೊಳ್ಳುತ್ತೇನೆ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ