ಕನ್ನಡ ಸಿನಿಮಾ ರಂಗದ ಅನರ್ಘ್ಯ ರತ್ನ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಶಂಕರ್ ನಾಗ್ ಅವರ ಜನುಮದಿನ ಇಂದು. ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದಿದ್ದ ಮೇರು ಪ್ರತಿಭೆ ಶಂಕರ್ ನಾಗ್ ಅವರು ಮರೆಯಾಗಿ ಇಂದಿಗೆ ಮೂವತ್ತೆರಡು ವರ್ಷಗಳೇ ಕಳೆದು ಹೋಗಿದೆ. ಉತ್ತರಕನ್ನಡದ ಹೊನ್ನಾವರದಲ್ಲಿ 1954 ರಲ್ಲಿ ಜನಿಸಿದ ಶಂಕರನಾಗ್ ವಿದ್ಯಾಭ್ಯಾಸದ ನಂತರ ಹಾರಿದ್ದು ದೂರದ ಮುಂಬೈಗೆ.

ಗಿರೀಶ್ ಕಾರ್ನಾಡ್ ಅವರ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿಕೊಂಡಿರುವ ಶಂಕರ್ ನಾಗ್ ಮುಂದೆ ಸೀತಾರಾಮು, ಅಟೋ ರಾಜ, ಪ್ರೀತಿ ಮಾಡು ತಮಾಷೆ ನೋಡು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ಅತೀ ಕಿರುವಯಸ್ಸಿನಲ್ಲಿಯೇ ನಮ್ಮನಗಲಿದ ಶಂಕರ್ ನಾಗ್ ಅವರು ಬರೀ ನಟ ಮಾತ್ರವಲ್ಲ. ಬದಲಿಗೆ ಆತ ಒಬ್ಬ ಅತ್ಯದ್ಭುತ ನಿರ್ದೇಶಕರಾಗಿ ಗುರುತಿಸಿಕೊಂಡ ಪ್ರತಿಭೆ. ಮಿಂಚಿನ ಓಟ ಸಿನಿಮಾದ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದ ಶಂಕರ್ ನಾಗ್ ಏಳು ರಾಜ್ಯಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜನ್ಮ ಜನ್ಮದ ಅನುಬಂಧ, ಗೀತಾ, ನ್ಯಾಯ ಎಲ್ಲಿದೆ, ನ್ಯಾಯ ಗೆದ್ದಿತು, ಗೆದ್ದ ಮಗ, ಸಾಂಗ್ಲಿಯಾನ , ಎಸ್. ಪಿ ಸಾಂಗ್ಲಿಯಾನ -2 , ಸಿಬಿಐ ಶಂಕರ್ ಸಿನಿಮಾಗಳು ಶಂಕರ್ ನಾಗ್ ಅವರನ್ನು ಮಗದಷ್ಟು ಜನಪ್ರಿಯತೆ ನೀಡಿದ್ದು ಸುಳ್ಳಲ್ಲ. ಇದರ ಜೊತೆಗೆ ಬಹು ಮುಖ್ಯವಾದ ವಿಚಾರವೆಂದರೆ ಇವರ ನಿರ್ದೇಶನದ ಆಕ್ಸಿಡೆಂಟ್ ಸಿನಿಮಾ ರಾಜ್ಯಪ್ರಶಸ್ತಿಗಳನ್ನಲ್ಲದೇ ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟಿತು.

ಜಾನ್ ಸ್ಟೈನ್ ಬೆಕ್ ಅವರ ದಿ ಪರ್ಲ್ ಕಾದಂಬರಿ ಆಧಾರಿಸಿ ನಿರ್ದೇಶಿಸಿದ ಒಂದು ಮುತ್ತಿನ ಕಥೆ ಎಂಬ ಸಿನಿಮಾ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ವರನಟ ಡಾ. ರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ ನೋಡಿ ಸ್ವಾಮಿ ನಾವಿರೋದೆ ಹೀಗೆ, ಹೊಸ ತೀರ್ಪು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ನಟನಾಗಿ ಹಾಗೂ ನಿರ್ದೇಶಕರಾಗಿಯೂ ಕನ್ನಡ ಸಿನಿಮಾರಂಗಕ್ಕೆ ಶಂಕರ್ ನಾಗ್ ನೀಡಿದ ಕೊಡುಗೆ ಅಪಾರ. ಇದರ ಜೊತೆಗೆ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಮನೆ ಮಾತಾಗಿರುವ ಶಂಕರ್ ನಾಗ್ ಆರ್ ಕೆ ನಾರಾಯಣ್ ಅವರ ಕಾದಂಬರಿ ಆಧರಿಸಿ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಧಾರಾವಾಹಿಯು ಭಾರತದ ಟಿವಿ ಇತಿಹಾಸದಲ್ಲಿ ಉತ್ತಮ ಧಾರಾವಾಹಿ ಎನಿಸಿಕೊಂಡಿರುವುದಂತೂ ನಿಜ.

ಇಂತಿಪ್ಪ ಶಂಕರ್ ನಾಗ್ ಅವರ ಜನುಮ ದಿನ ಇಂದು. ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ತಮ್ಮ ನಟನೆಯ ಮೂಲಕ, ಅಭಿನಯದ ಮೂಲಕ ವೀಕ್ಷಕರ ಮನಸ್ಸಲ್ಲಿ ಸದಾ ಕಾಲ ಹಸಿರಾಗಿರುತ್ತಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ