ಚಿತ್ರದಿಂದ ಚಿತ್ರಕ್ಕೆ ವಿಶಿಷ್ಟವಾದ ಪಾತ್ರಗಳನ್ನು ಪಡೆಯುತ್ತಿರುವ ಪ್ರತಿಭಾನ್ವಿತ ಕನ್ನಡದ ನಟ ಯಶ್ ಶೆಟ್ಟಿ. ಸದ್ಯ ಅವರು ತೆಲುಗು ಚಿತ್ರರಂಗದ ತಮ್ಮ ಮೊದಲ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಹಲವು ವಿಭಿನ್ನ ಪಾತ್ರಗಳಲ್ಲಿ ವಿಭಿನ್ನ ಕಥೆಗಳಲ್ಲಿ ನಟಿಸಿರುವ ಯಶ್ ಶೆಟ್ಟಿ ಅವರು, ಕನ್ನಡ ಹೊಸ ಯುವ ಖಳನಟನಾಗಿ ಹೊರಹೊಮ್ಮತ್ತಿರುವಾಗಲೇ, ತೆಲುಗಿನ ‘ವಿನರೋ ಭಾಗ್ಯಮು ವಿಷ್ಣು ಕಥಾ’ ಸಿನಿಮಾದಲ್ಲಿ ಕೂಡ ಖಳನಟನ ಪಾತ್ರವೊಂದಕ್ಕೆ ಬಣ್ಣ ಹಚ್ಚಿ ಬಂದಿದ್ದಾರೆ. ಈ ಬಗ್ಗೆ ಯಶ್ ಶೆಟ್ಟಿ ಮಾತನಾಡಿದ್ದಾರೆ.

“ನನ್ನ ಪ್ರಕಾರ ನಟನೊಬ್ಬನಿಗೆ ಯಾವುದೇ ರೀತಿಯ ಪ್ರಾದೇಶಿಕ ಬೇಲಿಗಳು ಇರಬಾರದು. ಆ ಭಾಷೆ ಈ ಭಾಷೆಯೆನ್ನದೆ ಪಾತ್ರದ ಬಗ್ಗೆ ಗಮನ ಕೊಡುವುದು ಮುಖ್ಯ. ಆದ್ದರಿಂದಲೇ, ‘ವಿನರೋ ಭಾಗ್ಯಮು ವಿಷ್ಣು ಕಥಾ’ ಚಿತ್ರದ ಪಾತ್ರದ ಆಫರ್ ಬಂದಾಗ ಸಂತಸದಿಂದ ಒಪ್ಪಿಕೊಂಡೆ” ಎನ್ನುತ್ತಾರೆ.

“ಈ ಪಾತ್ರ ನನಗೆ ಚಾಲೆಂಜಿಂಗ್ ಎನಿಸಿತು. ಚಿತ್ರದಲ್ಲಿ ನನ್ನದು ಒಂದು ಪ್ರಮುಖ ಖಳನಟನ ಪಾತ್ರ. ಕಥೆಗೆ ಹಲವು ಟ್ವಿಸ್ಟ್ ಗಳನ್ನೂ ಈ ಪಾತ್ರ ನೀಡುತ್ತದೆ. ಜೊತೆಗೆ ತೆಲುಗಿನ ಪ್ರಖ್ಯಾತ ನಟರಾದ ಮುರಳಿ ಶರ್ಮ ಅವರ ಜೊತೆಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅವರಿಗೆ ನಟನೆಯ ಬಗ್ಗೆ ಅಪಾರ ಜ್ಞಾನವಿದೆ. ಅವರೊಂದಿಗೆ ನಟಿಸಿರುವುದು ಸಂತಸದ ವಿಚಾರ” ಎನ್ನುತ್ತಾರೆ ಯಶ್ ಶೆಟ್ಟಿ.

‘ವಿನರೋ ಭಾಗ್ಯಮು ವಿಷ್ಣು ಕಥಾ’ ಚಿತ್ರದಲ್ಲಿ ಕಿರಣ್ ಅಬ್ಬಾವರಮ್ ಹಾಗು ಕಶ್ಮೀರ ಪರ್ದೆಸಿ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿರುವ ಯಶ್ ಶೆಟ್ಟಿ ಅವರಿಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಕಾಯುತ್ತಿವೆ.

ವಿಭಿನ್ನ ಪಾತ್ರಗಳಲ್ಲಿ ಯಶ್ ಶೆಟ್ಟಿಯವರನ್ನು ತೋರಿಸಲಿರುವ ‘ಪೆಪೆ’, ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’,’ಗೌಳಿ’, ಹಾಗು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ