ಕನ್ನಡದ ಹಿರಿಯ ನಟ, ದಿಗ್ಗಜರಾದ ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ತೊಂಬತ್ತರ ದಶಕದಲ್ಲೇ ನಟನೆಯನ್ನು ಆರಂಭಿಸಿ ಈಗಲೂ ಕೂಡ ಬೆಳ್ಳಿತೆರೆಯ ಮೇಲೆ ಬರುತ್ತಿರುವ ನಟರು ಅವರು. ಇವರ ಈ ಸಿನಿಸೇವೆ ಹಾಗು ಸಮಾಜ ಪರ ಕೆಲಸಗಳು ಅವರಿಗೆ ಇಂದು ‘ಗೌರವ ಡಾಕ್ಟರೇಟ್’ ಪದವಿಯನ್ನ ತಲುಪಿಸಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನೀಡಿರುವ ಈ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಅನಂತ್ ನಾಗ್ ಅವರಿಗೆ ನೀಡಿ ಗೌರವಿಸಲಾಯಿತು.

ಸಾಮಾನ್ಯವಾಗಿ ಅನಂತ್ ನಾಗ್ ಅವರು ಪ್ರಶಸ್ತಿ ಪುರಸ್ಕಾರಗಳಿಂದ ದೂರ ಉಳಿಯುವವರು. ಆದರೆ ಈ ಬಾರಿ ಈ ಪುರಸ್ಕಾರವನ್ನ ಒಪ್ಪಿಸಿಕೊಳ್ಳಲು ಕಾರಣ ಕೂಡ ನೀಡಿದ್ದಾರೆ. ಅವರು ವಿದೇಶದಲ್ಲಿದ್ದಾಗ ಈ ಮಾಹಿತಿ ತಲುಪಿತ್ತು. ಅದರ ಜೊತೆಗೆ ಉನ್ನತ ಶಿಕ್ಷಣ ಸಚಿವರಾದ ಡಾ ಸಿ ಎನ್ ಅಶ್ವತ್ ನಾರಾಯಣ್ ಅವರ ಅಭಿನಂದನೆಗಳನ್ನು ತಿಳಿದ ಅನಂತ್ ನಾಗ್ ಅವರ ಪತ್ನಿ ಗಾಯತ್ರಿ ಹಾಗು ಮಗಳು ಅದಿತಿ ಒತ್ತಾಯ ಮಾಡಿ ಇದನ್ನ ಒಪ್ಪಿಕೊಳ್ಳುವಂತೆ ಮಾಡಿದ್ದರು. ಹೀಗೆಂದು ಪುರಸ್ಕಾರ ಪಡೆದ ನಂತರ ಸ್ವತಃ ಅನಂತ್ ನಾಗ್ ಅವರೇ ಹೇಳಿಕೊಂಡರು.


ಜೊತೆಗೆ ತಮ್ಮ ಬಾಲ್ಯ, ವಿದ್ಯಾಭ್ಯಾಸ, ವೃತ್ತಿಜೀವನದ ಆರಂಭಿಕ ದಿನಗಳು ಎಲ್ಲವನ್ನು ಒಮ್ಮೆ ನೆನೆದರು. “ನನಗೆ ಈ ಪುರಸ್ಕಾರ ದೊರೆಯಲು ಮೊತ್ತಮೊದಲ ಕಾರಣ ಕನ್ನಡ ಚಿತ್ರರಂಗ. ನನ್ನ ಮೊದಲ ಸಿನಿಮಾ ನಡೆದದ್ದು ಮೈಸೂರಿನಲ್ಲೇ. ನಾನು ನನ್ನ ಆರಂಭಿಕ ದಿನಗಳಲ್ಲಿ ಅಣ್ಣಾವ್ರನ್ನ ನೋಡಿಕೊಂಡು ಬೆಳೆದವನು. ಅವರು ಎಲ್ಲಾ ರೀತಿಯ ಸಿನಿಮಾಗಳನ್ನ ಮಾಡಿದ್ದರು. ಕನ್ನಡ ಚಿತ್ರರಂಗ ಇಷ್ಟು ವ್ಯಾಪ್ತವಾಗಿ ಬೆಳೆಯುವುದರಲ್ಲಿ ಡಾ ರಾಜಕುಮಾರ್ ಅವರ ಪಾತ್ರ ಬಹುದೊಡ್ಡದು” ಎನ್ನುತ್ತಾ, ಡಾಕ್ಟರೇಟ್ ಪದವಿ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರ ಪತ್ನಿ ಹಾಗು ಪುತ್ರಿಯ ಜೊತೆಗೆ ಅಳಿಯ ವಿವೇಕ್ ಅವರು ಕೂಡ ಉಪಸ್ಥಿತರಿದ್ದರು.

ಈ ಪುರಸ್ಕಾರ ಸಮಾರಂಭದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವರಾದ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರು ಹಾಗು ಅವರ ಜೊತೆಗೆ ಕರ್ನಾಟಕ ಫಿಲ್ಮಂ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ,ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಾನಳ್ಳಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ