ತೆಲುಗು ನಟಿ ಸಮಂತಾ ರುತ್ ಪ್ರಭು ತಮ್ಮ ವೈವಾಹಿಕ ಜೀವನದಲ್ಲಿ ಬಿರುಕುಗಳಿಗೆ ಬ್ರೇಕ್ ನೀಡಲೆಂಬಂತೆ ನಟ ನಾಗಚೈತನ್ಯ ಅಕ್ಕಿಯೇನಿ ಅವರಿಗೆ ವಿಚ್ಛೇದನ ನೀಡಿ ಭಾರೀ ಸುದ್ದಿಯಲ್ಲಿದ್ದಿದ್ದು ನಮಗೆಲ್ಲಾ ತಿಳಿದೇ ಇದೆ.
ವಿಚ್ಛೇದನದ ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈಹಾಕಿದ ಸಮಂತಾ ಅವೆಲ್ಲವುದರಲ್ಲೂ ಯಶಸ್ವಿ ಕೂಡ ಆದರು.

ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡಿಕೊಂಡಿರುತ್ತಿದ್ದ ಸಮಂತಾ ಇತ್ತೀಚೆಗೆ ತುಸು ಸೈಲೆಂಟ್ ಆಗಿರುವುದೂ ನೆಟ್ಟಿಗರ ಕುತೂಹಲ ಕೆರಳಿಸಿದೆ. ಸಮಂತಾ ಸೈಲೆಂಟಾದರೂ ಅವರ ಸಿನಿಮಾಗಳು ಸದ್ದು ಮಾಡುತ್ತಲೇ ಇವೆ.

ಹೌದು! ಸಮಂತಾ ಅವರ ಪ್ಯಾನ್ ಇಂಡಿಯಾ ಚಿತ್ರ “ಯಶೋದಾ” ಬರುವ ತಿಂಗಳು ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ‘ಯಶೋದಾ’ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಬಿಡುಗಡೆಗೆ 15 ದಿನಗಳು ಇರುವಾಗ ಟ್ರೈಲರ್ ರಿಲೀಸ್ ಮಾಡಲಿದ್ದು, ಪ್ರಚಾರ ಆರಂಭ ಮಾಡುತ್ತಿದ್ದಾರೆ.

ಈಗಾಗಲೇ ಸಿನಿಮಾ ಪ್ರಚಾರ ಶುರು ಮಾಡಬೇಕಿದ್ದ ಚಿತ್ರತಂಡ ಅದ್ಯಾಕೆ ತಡ ಮಾಡಿತೋ ಗೊತ್ತಿಲ್ಲ. ಆದರೆ, ಇದೇ ತಿಂಗಳ 27ರಂದು ಟ್ರೇಲರ್ ಬಿಡುಗಡೆ ಮಾಡಲಿದ್ದು ಇತ್ತೀಚೆಗೆ ಪ್ರಚಾರ ಶುರು ಮಾಡಿದೆ. ಆದರೂ ಸಮಂತಾ ಮಾತ್ರ ಇನ್ನೂ ಸೈಲೆಂಟಾಗೇ ಇದ್ದಾರೆ.

‘ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರ. ಶಿವಲೆಂಕ ಕೃಷ್ಣ ಪ್ರಸಾದ್ ನಿರ್ಮಾಣದಲ್ಲಿ, ಹರಿ ಹಾಗೂ ಹರೀಶ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಸೇರಿದಂತೆ ಹಲವು ನಟರು ನಟಿಸಿದ್ದಾರೆ.

ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಅದರ ಟ್ರೈಲರ್ ಅನ್ನು ಕನ್ನಡದ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರ ಬಳಿ ರಿಲೀಸ್ ಮಾಡಿಸಲು ಚಿತ್ರ ತಂಡ ನಿರ್ಧರಿಸಿದೆ. ಅಕ್ಟೋಬರ್ 27ರಂದು ‘ಯಶೋದಾ’ ಸಿನಿಮಾದ ಕನ್ನಡ ಟ್ರೈಲರ್ ಅನ್ನು ರಕ್ಷಿತ್ ಶೆಟ್ಟಿ ರಿಲೀಸ್ ಮಾಡಲಿದ್ದಾರೆ. ಸಂಜೆ 5.36ಕ್ಕೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು ಈ ಮೂಲಕ ‘ಯಶೋದಾ’ ಯಾವ ರೀತಿಯ ಸಿನಿಮಾ ಎಂಬ ಪ್ರೇಕ್ಷಕರ ಕುತೂಹಲ ತುಸು ಮಟ್ಟಿಗಾದರೂ ತಣಿಯಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ