‘ಕೆಜಿಎಫ್’ ಎಂಬ ಹೊಸ ಪ್ರಪಂಚವನ್ನೇ ಸಿನಿಪ್ರೇಮಿಗಳಿಗೆ ಕಟ್ಟಿಕೊಟ್ಟ ನಂತರ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಮಾಡುತ್ತಿರುವ ಮುಂದಿನ ಸಿನಿಮಾ ‘ಸಲಾರ್’. ಸದ್ಯ ಈ ಚಿತ್ರದ ಬಗ್ಗೆ ತಿಳಿಯದಿರುವವರೇ ಇಲ್ಲ. ತೆಲುಗಿನ ಸ್ಟಾರ್ ನಟ ಪ್ರಭಾಸ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾ ಭಾರತದಾದ್ಯಂತ ಸಿನಿರಸಿಕರು ಕಾತರದಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು.

‘ಹೊಂಬಾಳೆ ಫಿಲಂಸ್’ ನಿರ್ಮಾಣ ಮಾಡುತ್ತಿರೋ ಈ ಸಿನಿಮಾದಲ್ಲಿ ಸ್ಟಾರ್ ಗಳ ದಂಡಿಗೇನೂ ಕಡಿಮೆಯಿಲ್ಲ. ಸದ್ಯ ಈ ಸಾಲಿಗೆ ಕನ್ನಡದ ಪ್ರತಿಭೆಯೊಂದು ಸೇರ್ಪಡೆಯಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆ ಕಂಡು ಮನೆ-ಮನಗಳನ್ನು ಮೆಚ್ಚಿಸಿದ್ದ ಡಾಲಿ ಧನಂಜಯ ಅವರ ನಟನೆಯ ಸಿನಿಮಾ ‘ರತ್ನನ್ ಪ್ರಪಂಚ’ ಎಲ್ಲೆಡೆಯೂ ಜನಪ್ರಿಯ. ಅದರ ನಟರು ಕೂಡ. ಚಿತ್ರದಲ್ಲಿ ಉತ್ತರ ಕರುನಾಡಿನ ಉಡಾಳ್ ಬಾಬು ರಾವ್ ಎಂಬ ಪಾತ್ರ ಮಾಡಿದ್ದ ಪ್ರಮೋದ್ ಅವರೂ ಕೂಡ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದರು.

ಸದ್ಯ ಇದೇ ಪ್ರಮೋದ್ ಅವರು ‘ಸಲಾರ್’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಭಾಸ್ ಅವರ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಮಧು ಗುರುಸ್ವಾಮಿ, ಮುಂತಾದ ಹೆಸರಾಂತ ನಟರು ಈ ಚಿತ್ರದ ತಾರಗಾಣದಲ್ಲಿದ್ದು, ಇದಕ್ಕೆ ಕನ್ನಡದ ಯುವಪ್ರತಿಭೆಯ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ. ಈ ಬಗ್ಗೆ ಸಿನಿಮಾ ತಂಡದವರು ಎಲ್ಲೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಪ್ರಮೋದ್ ಅವರು ಈಗಾಗಲೇ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.

‘ಪ್ರೀಮಿಯರ್ ಪದ್ಮಿನಿ’, ‘ಗೀತಾ ಬ್ಯಾಂಗಲ್ ಸ್ಟೋರ್’, ‘ರತ್ನನ್ ಪ್ರಪಂಚ’ ಮುಂತಾದ ಸಿನಿಮಾಗಳ ಮೂಲಕ ಈಗಾಗಲೇ ತನ್ನ ನಟನಾ ಪ್ರತಿಭೆಯಿಂದ ಕನ್ನಡಿಗರ ಮಧ್ಯೆ ಜನಪ್ರಿಯವಾಗಿರುವ ಪ್ರಮೋದ್, ‘ಸಲಾರ್’ ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನಷ್ಟು ಜನರನ್ನು ತಲುಪುವ ಸಾಧ್ಯತೆಯಿದೆ. ಸದ್ಯ ಇವರ ಮುಂದಿನ ಸಿನಿಮಾ ‘ಬಾಂಡ್ ರವಿ’, ಬಿಡುಗಡೆಗೆ ಸಿದ್ದವಾಗಿದ್ದು, ‘ಇಂಗ್ಲೀಷ್ ಮಂಜ’, ‘ಭುವನಮ್ ಗಗನಮ್’ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ‘ಸಲಾರ್’ ಎಂಬಂತಹ ಒಂದು ದೊಡ್ಡ ಸಿನಿಮಾ ಪ್ರಮೋದ್ ಅವರ ವೃತ್ತಿಜೀವನಕ್ಕೆ ಒಂದೊಳ್ಳೆಯ ತಿರುವು ಕೊಡುವ ಸಾಧ್ಯತೆಯಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ