ಅಲ್ಪಾವಧಿಯಲ್ಲಿ ಸ್ಟಾರ್ ನಟಿಯರ ಪಟ್ಟಕ್ಕೇರಿದ ತಾರೆಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಬಹುತೇಕ ನಾಯಕ ಪ್ರಧಾನ ಸಿನಿಮಾಗಳಲ್ಲಿಯೇ ನಟಿಸಿದ್ದ ನಟಿ ಇದೀಗ ಹಿಂದಿಯ ಗುಡ್ ಬೈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಲಿದ್ದಾರೆ. ಅದರಲ್ಲೂ ಬಚ್ಚನ್ ಗೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ರಶ್ಮಿಕಾ.

ಅಂದ ಹಾಗೆ ಗುಡ್ ಪೈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕೌಟುಂಬಿಕ ಕಥಾ ಆಧಾರಿತ ಚಿತ್ರ ಇದಾಗಿದ್ದು, ಜನರೇಷನ್ ಗ್ಯಾಪ್, ಅಪ್ಪ ಮಕ್ಕಳ ನಡುವಿನ ಸಂಬಂಧ, ಆಧುನಿಕತೆ ಮತ್ತು ಹಳೆಯ ಸಂಪ್ರದಾಯಗಳ ನಡುವಿನ ತಿಕ್ಕಾಟ, ಕೌಟುಂಬಿಕ ಮೌಲ್ಯ, ಪೋಷಕರ ಮಹತ್ವ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಿನಿಮಾ ಮಾತನಾಡುತ್ತದೆ.

ಅಲ್ಲದೆ ‘ಗುಡ್ ಬೈ’ ಸಿನಿಮಾದಲ್ಲಿ ರಶ್ಮಿಕಾರ ತಾಯಿಯ ಸಾವಾಗಿರುತ್ತದೆ, ಅವರ ತಾಯಿಯ ಅಂತಿಮ ಕಾರ್ಯವನ್ನು ರಶ್ಮಿಕಾ ಸೇರಿದಂತೆ ಮಕ್ಕಳು ಹೇಗೆ ನಡೆಸಿಕೊಡುತ್ತಾರೆ ಎಂಬುದನ್ನು ಹಾಸ್ಯಮಿಶ್ರಿತ ಭಾವುಕ ಮಾದರಿಯಲ್ಲಿ ತೋರಿಸುವ ಸಿನಿಮಾ ‘ಗುಡ್ ಬೈ’.

ಸಿನಿಮಾದಲ್ಲಿ ರಶ್ಮಿಕಾರ ತಾಯಿಯ ಪಾತ್ರದಲ್ಲಿ ನೀನಾ ಗುಪ್ತಾ ನಟಿಸಿದ್ದಾರೆ. ವಿಶೇಷವೆಂದರೆ ಟ್ರೈಲರ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಅಮಿತಾಬ್ ಬಚ್ಚನ್ ಜಗಳವಾಡುತ್ತಿರುವ ದೃಶ್ಯಗಳು ಹೆಚ್ಚಿವೆ. ಆದರೆ ರಶ್ಮಿಕಾರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಅವರ ಈ ಪಾತ್ರ ವಿಭಿನ್ನವಾಗಿರುವುದಂತೂ ಹೌದು.

ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತ ಮಾತ್ರವಲ್ಲದೆ, ಪವೈಲ್ ಗುಲಾಟಿ, ಇಲಿ ಅವರ್ಮಾ, ಕಾಮಿಡಿಯನ್ ಸುನಿಲ್ ಗ್ರೋವರ್, ಸಾಹಿಲ್ ಮೆಹ್ತಾ, ಆಶಿಷ್ ವಿಧ್ಯಾರ್ಥಿ ತಾರಾಗಣದಲ್ಲಿದ್ದಾರೆ. ವಿಕಾಸ್ ಭಾಲ್ ನಿರ್ದೇಶನದ ಚಿತ್ರವನ್ನು ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ರ್ನಿರ್ಮಾಣ ಮಾಡಿದ್ದಾರೆ. ಜೊತೆಗೆ ಶೋಭಾ ಕಪೂರ್, ರುಚಿಕಾ ಕಪೂರ್ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾವು ಅಕ್ಟೋಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಶ್ಮಿಕಾಗೆ ಹಿಂದಿಯ ನಟನೆ ಹೊಸತೇನಲ್ಲ. ಈಗಾಗಲೇ ಅವರು ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮೊದಲು ಸಹಿ ಹಾಕಿದ ಹಿಂದಿ ಚಿತ್ರ ‘ಮಿಷನ್ ಮಜ್ನು’ ಇನ್ನೂ ಬಿಡುಗಡೆಯಾಗಿಲ್ಲ. ಇದರಲ್ಲಿ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾ, ಭೂಮಿಕಾ ಚಾವ್ಲಾ ಜೊತೆ ನಟಿಸಿದ್ದಾರೆ. ಜೊತೆಗೆ ದಕ್ಷಿಣದಲ್ಲಿ ‘ಪುಷ್ಪ 2’ ಹಾಗೂ ತಮಿಳು ನಟ ವಿಜಯ್ ಜೊತೆಗಿನ ಹೊಸ ಸಿನಿಮಾವೊಂದು ರಶ್ಮಿಕಾ ಕೈಯಲ್ಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ