ಮೋಹಕ ತಾರೆ ರಮ್ಯ ಅವರು ಮರಳಿ ಬಣ್ಣದ ಲೋಕದ ಕಡೆಗೆ ಹೆಜ್ಜೆ ಹಾಕಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಸದ್ಯ ಎಲ್ಲೆಡೆ ರಭಸದಿಂದ ಹರಿದಾಡುತ್ತಿರುವ ಸುದ್ದಿಗಳಲ್ಲಿ ಇದೂ ಒಂದು. ರಾಜ್ ಬಿ ಶೆಟ್ಟಿ ಅವರು ರಚಿಸಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ‘ಸ್ವಾತಿ ಮುತ್ತಿನ ಮಳೆಹನಿಯೇ’ ಮೂಲಕ ಬೆಳ್ಳಿತೆರೆಗೆ ಮರಳಿ ಬರುತ್ತಿರುವ ರಮ್ಯ, ಕೇವಲ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲಂಸ್’ ಹಾಗೂ ರಮ್ಯ ಅವರ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಈ ಹೊಸ ಸಿನಿಮಾದಲ್ಲಿನ ರಮ್ಯ ಅವರ ಪಾತ್ರದ ಬಗೆಗೆ ರಾಜ್ ಬಿ ಶೆಟ್ಟಿ ಒಂದಷ್ಟು ಮಾತನಾಡಿದ್ದಾರೆ.

ಈಗಾಗಲೇ ‘ಒಂದು ಮೊಟ್ಟೆಯ ಕಥೆ’ ಹಾಗು ‘ಗರುಡ ಗಮನ ವೃಷಭ ವಾಹನ’ ರೀತಿಯ ಎರಡು ವಿಭಿನ್ನ ಸಿನಿಮಾಗಳ ರೂವಾರಿಯಾಗಿರುವ ರಾಜ್ ಬಿ ಶೆಟ್ಟಿ, ಈ ಚಿತ್ರದ ಮೂಲಕ ಇನ್ನೊಂದು ಹೊಸ ಬಗೆಯ ಕಥೆಯನ್ನ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಚಿತ್ರದಲ್ಲಿನ ರಮ್ಯ ಅವರ ಪಾತ್ರದ ಬಗೆಗೆ ಮಾತನಾಡುತ್ತಾ, “ರಮ್ಯ ಅವರು ಕ್ಯಾಮೆರಾ ಮುಂದೆಯೂ ನಾಯಕಿಯೇ, ಮರೆಯಲ್ಲಿಯೂ ನಾಯಕಿಯೇ. ಅವರಿದ್ದರೆ ನಾವೆಲ್ಲಾ ಬದಿಯಲ್ಲಿ ನಿಂತುಕೊಳ್ಳಬೇಕಾಗುತ್ತದೆ. ಈ ಚಿತ್ರ ಒಂದು ಮಹಿಳಾ ಪ್ರಧಾನ ಕಥೆಯನ್ನ ಹೊಂದಿರುವ ಸಿನಿಮಾ ಆಗಿರಲಿದೆ. ಹಾಗಾಗಿ ರಮ್ಯ ಅವರ ನಟನೆಗೆ ಇಲ್ಲಿ ಬಹುಪ್ರಾಮುಖ್ಯತೆ ಇದೆ. ಜೊತೆಗೆ ರಮ್ಯ ಅವರು ಹಿಂದೆಂದೂ ಮಾಡಿರದ ಪಾತ್ರದಲ್ಲಿ ಈ ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ” ಎಂದಿದ್ದಾರೆ ರಾಜ್.

‘ನಾಗರಹಾವು’ ಸಿನಿಮಾದ ನಂತರ ಚಿತ್ರರಂಗದಿಂದ ವಿರಾಮ ಪಡೆದಿದ್ದ ರಮ್ಯ ಅವರು, ತಮ್ಮ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಸಂಸ್ಥೆಯ ಘೋಷಣೆಯ ಮೂಲಕ ಚಿತ್ರರಂಗಕ್ಕೆ ಹಿಂದಿರುಗುವ ಮುನ್ಸೂಚನೆ ಕೊಟ್ಟಿದ್ದರು. ಈಗ ರಾಜ್ ಬಿ ಶೆಟ್ಟಿಯವರ ಜೊತೆಗಿನ ಈ ಹೊಸ ಸಿನಿಮಾದ ಮೂಲಕ ಮರಳಿ ತೆರೆಮೇಲೆ ಬರುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ