ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಚಿತ್ರದೊಂದಿಗಿನ ತಮ್ಮ ಅನುಭವವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಅಂದ ಹಾಗೇ ಇದು ತೂಗೂದೀಪ ದರ್ಶನ್ ಜೊತೆಗೆ ಅವರ ಮೂರನೆಯ ಚಿತ್ರವಾಗಿದ್ದು ಈ ಬಗ್ಗೆ ಸಂತಸವನ್ನು ಕೂಡಾ ಆಕೆ ವ್ಯಕ್ತಪಡಿಸಿದರು.

“ಬುಲ್ ಬುಲ್ ಹಾಗೂ ಅಂಬರೀಶ ನಂತರ ಇದು ದರ್ಶನ್ ಅವರ ಜತೆ ನನ್ನ ಮೂರನೆಯ ಸಿನಿಮಾ. ಈ ಬಗ್ಗೆ ನನಗೆ ಬಹಳ ಖುಷಿ ಇದೆ. ಅವರೊಂದಿಗೆ ನಟಿಸುವುದೇ ಒಂದು ವಿಶೇಷ ಅನುಭವ. ಮೊದಲಿನಿಂದಲೂ ಅವರು ನನ್ನನ್ನು ಬಹಳ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ನಾವು ಈ ಚಿತ್ರದ ಬಗ್ಗೆ ಏನೇನೂ ಅಪ್ ಡೇಟ್ ಗಳನ್ನು ಕೊಡಲಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ತುಸು ಬೇಸರವಾಗಿರಬಹುದು. ಆದರೆ ವಿಶೇಷವೆಂದರೆ ಸಿನಿಪ್ರಿಯರೇ ಈ ಚಿತ್ರದ ಬಗ್ಗೆ ಮಾತಾಡುತ್ತಾ, ಎಲ್ಲಾ ಕಡೆ ಇದರ ಬಗ್ಗೆ ಕೇಳುತ್ತಾ ಭರ್ಜರಿ ಪ್ರಮೋಷನ್ ಕೊಡುತ್ತಿದ್ದಾರೆ” ಎಂದರು ಗುಳಿ ಕೆನ್ನೆಯ ಚೆಲುವೆ

ಮಿಡಿಯಾ ಹೌಸ್ ಸ್ಟುಡಿಯೋ ಮೂಲಕ ಬಿ ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡುತ್ತಿರುವ ಈ ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಬಹಳ ವಿಶೇಷ ಹಾಗೂ ಹಿಂದೆಂದೂ ಮಾಡದ ಪಾತ್ರದಲ್ಲಿ ರಚಿತಾ ಕಾಣಿಸಿಕೊಳ್ಳಲಿದ್ದಾರೆ.

ಶಿಕ್ಷಣ ವ್ಯವಸ್ಥೆ ಹಾಗೂ ಅದರ ಲೋಪದೋಷಗಳ ಬಗ್ಗೆ ಈ ಚಿತ್ರ ಕಥೆ ಇದ್ದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. “ನನಗೆ ಹರಿಕೃಷ್ಣ ಸರ್ ಅವರ ನಿರ್ದೇಶನದ ಸ್ಟೈಲ್ ತುಂಬಾ ಇಷ್ಟ. ಈ ಚಿತ್ರದ ಸಂಗೀತದಲ್ಲೂ ನನಗೆ ತುಂಬಾ ಆಸಕ್ತಿ ಉಂಟಾಗಿದೆ. ಹಾಗಾಗಿ ನನ್ನ ಪಾತ್ರದ ಶೂಟಿಂಗ್ ಮುಗಿದ ಮೇಲೂ ನಾನು ಹಾಡುಗಳ ನಿರ್ದೇಶನವನ್ನು ನೋಡುವುದಕ್ಕಾಗಿ ಸೆಟ್ಟಿಗೆ ಬರುವ ಯೋಚನೆಯಲ್ಲಿದ್ದೇನೆ” ಎಂದು ತಮ್ಮ ಅಭಿಪ್ರಾಯ ಅನುಭವವನ್ನು ಹಂಚಿಕೊಂಡರು ರಚಿತಾ ರಾಮ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ