ಮತ್ತೆ ತೆರೆಯ ಮೇಲೇರುವ ಸಿದ್ಧತೆ ನಡೆಸುತ್ತಿರುವ ನಟಿ ರಾಗಿಣಿ ದ್ವಿವೇದಿ “ನಾನು ಒಬ್ಬ ಭಾರತೀಯ” ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು! ನಿರ್ದೇಶಕ ಬಾಬು ಗಣೇಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪಾನ್ ಇಂಡಿಯಾ ಚಿತ್ರ “ನಾನು ಒಬ್ಬ ಭಾರತೀಯ”ದಲ್ಲಿ ರಾಗಿಣಿಯವರು ಮಿಲಿಟರಿ ಕಮಾಂಡೊ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಮಾತನಾಡಿದ ಅವರು ” ತೆರೆಯ ಮೇಲೆ ಕಮಾಂಡೊ ಆಗಿ ಕಾಣಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಈ ಬಗ್ಗೆ ಬಹಳಷ್ಟು ಮಾಹಿತಿ ತಿಳಿಯುತ್ತಾ ಕೌಶಲಗಳನ್ನು ಕಲಿಯುತ್ತಿದ್ದೇನೆ. ನನ್ನ ತಂದೆ ಮಿಲಿಟರಿಯಲ್ಲಿ ಕೆಲಸ ಮಾಡಿದವರು ಹಾಗಾಗಿ ನನಗೆ ಈ ಪಾತ್ರ ಹೃದಯಕ್ಕೆ ಬಹಳ ಹತ್ತಿರವಾದದ್ದು” ಎಂದು ಹೇಳುತ್ತಾರೆ ರಾಗಿಣಿ.

ಜೊತೆಗೆ “ಕಮಾಂಡೊ ಆಗಿ ಕಾಣಿಸಿಕೊಳ್ಳಲು ಬಹಳಷ್ಟು ತಯಾರಿ ಬೇಕು, ಕೌಶಲಗಳು, ಮೈಕಟ್ಟು ಇತ್ಯಾದಿ ಎಲ್ಲವೂ ಮುಖ್ಯ. ಹಾಗಾಗಿ ಈ ವಿಷಯದಲ್ಲಿ ನನ್ನ ತಂದೆಯವರ ಸಲಹೆಗಳನ್ನು ಪಡೆಯುತ್ತಾ ಕಿಕ್ ಬಾಕ್ಸಿಂಗ್ ಹಾಗೂ ಮಾರ್ಷಿಯಲ್ ಆರ್ಟ್ಸ್ ಅನ್ನು ಅಭ್ಯಾಸ ಮಾಡುತ್ತಿದ್ದೇನೆ. ಇದೊಂದು ಸ್ತೀ ಪ್ರಧಾನ ಚಿತ್ರವಾಗಿದ್ದು ಒಬ್ಬ ನಿಜವಾದ ದೇಶಭಕ್ತನಿಗೆ ಯಾವುದೇ ಜಾತಿ ಮತದ ಹಂಗಿರುವುದಿಲ್ಲ ಎಂಬುದನ್ನು ತಿಳಿಹೇಳುವ ಚಿತ್ರಕತೆಯನ್ನು ಹೊಂದಿದೆ. ಇಡೀ ಚಿತ್ರ ತಂಡ ಚೆನ್ನೈನದ್ದು. ಅವರ ಕ್ರಿಯಾಶೀಲತೆ ಈ ಚಿತ್ರದ ಬಗ್ಗೆ ನನಗೆ ಉತ್ಸಾಹವನ್ನು ಹೆಚ್ಚಿಸುತ್ತಿದೆ.” ಎಂದಿದ್ದಾರೆ.

ಚಿತ್ರದ ನಿರ್ದೇಶಕ ಬಾಬು ಗಣೇಶ್ ಮಾತನಾಡಿ ” ಪ್ರತಿ ದಿನ ಆರುಗಂಟೆ ಎಂಬಂತೆ ನಿರಂತರ ಎಂಟು ದಿನ ಶೂಟಿಂಗ್ ಮಾಡಿ ಮುಗಿಸುವ ಯೋಜನೆ ನಮ್ಮದಾಗಿದೆ. ಹಾಡು, ಫೈಟಿಂಗ್ ಎಲ್ಲವೂ ಸೇರಿ ಇಷ್ಟು ಸಮಯದಲ್ಲಿ ಶೂಟಿಂಗ್ ಮುಗಿಸಬೇಕು. ಇದು ಒಂದು ಹೊಸ ಪ್ರಯತ್ನ. ಅಲ್ಲದೆ ನಾವು ಲಿಮ್ಕ ಬುಕ್ ರೆಕಾರ್ಡ್, ಏಷಿಯ ಬುಕ್ ರೆಕಾರ್ಡ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನ ಜೂರಿ ಮೆಂಬರ್ ಗಳನ್ನೂ ಕರೆಸುತ್ತಿದ್ದೇವೆ. ಇಡೀ ಶೂಟಿಂಗ್ ಪ್ರಕ್ರಿಯೆಯಲ್ಲಿ ಅವರು ನಮ್ಮೊಂದಿಗಿರುತ್ತಾರೆ. ದೇಶದ ಸಿಎಎ ಹಾಗೂ ಎನ್ ಆರ್ ಸಿ ಯೋಜನೆಯ ಕುರಿತಾದ ಸಿನಿಮಾ ಇದಾಗಿದ್ದು ಭಯೋತ್ಪಾದನೆಯ ಹಲವಷ್ಟು ಮುಖಗಳನ್ನು ಚಿತ್ರದ ಮೂಲಕ ತೆರೆದಿಡುವ ಪ್ರಯತ್ನ ನಡೆಸುತ್ತಿದ್ದೇವೆ. ಈ ಚಿತ್ರ ಭಾರತೀಯ ಸೈನಿಕರಿಗೆ ಸಮರ್ಪಿಸಲಿದ್ದೇವೆ.” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ