ಸ್ಟಾರ್ ನಟ ನಟಿಯರ ನಂತರ ಅವರ ಮಕ್ಕಳು ಸಿನಿಮಾಗಳಿಗೆ ಕಾಲಿಡುವುದು ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೇ ನಡೆದುಕೊಂಡು ಬಂದಿದೆ. ಹಲವು ಹಿರಿಯ ಕಲಾವಿದರ ಮಕ್ಕಳು ಇದೇ ರೀತಿ ದೊಡ್ಡ ದೊಡ್ಡ ಸಿನಿಮಾಗಳಿಂದಲೇ ತಮ್ಮ ಸಿನಿಪಯಣ ಆರಂಭಿಸಿರುವುದು ಇದೆ. ಆದರೆ ಮೊದಲ ಎರಡೂ ಸಿನಿಮಾಗಳು ಸ್ಟಾರ್ ನಟರ ಜೊತೆಗಿನ ಚಿತ್ರಗಳಾದರೆ! ಅದು ಕೂಡ ಮೊದಲಿನ ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನವೇ! ಹೌದು, ಇಂತಹ ಅದೃಷ್ಟ ಪಡೆದಿರುವ ನಟಿ, ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆಯಾದ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್.

ರಾಧನಾ ರಾಮ್ ಅವರು ತಮ್ಮ ಸಿನಿಪಯಣವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾದ ಮೂಲಕ ಆರಂಭಿಸುತ್ತಿದ್ದಾರೆ ಎಂಬುದು ಈ ಹಿಂದೆಯೇ ಘೋಷಣೆಯಾಗಿದ್ದ ವಿಷಯ. ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಸದ್ಯ ‘D55’ ಎಂದು ಕರೆಸಿಕೊಳ್ಳುತ್ತಿರುವ ಹೊಸ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಾಧನಾ ರಾಮ್ ಅವರು ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ.

ಸದ್ಯ ಕೇಳಿಬರುತ್ತಿರುವ ಹೊಸ ಸುದ್ದಿ ಏನೆಂದರೆ ಕನ್ನಡದ ಪ್ರಖ್ಯಾತ ನಿರ್ದೇಶಕರಾದ ಜೋಗಿ ಪ್ರೇಮ್ ಹಾಗು ಸ್ಟಾರ್ ನಟ ಧ್ರುವ ಸರ್ಜಾ ಅವರ ಜೋಡಿಯಲ್ಲಿ ಬರುತ್ತಿರೋ ಹೊಸ ಸಿನಿಮಾಗೆ ರಾಧನಾ ರಾಮ್ ಅವರನ್ನೇ ನಾಯಕಿಯಾಗಿ ಆರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಹೊಸ ಚಿತ್ರಕ್ಕೆ ‘ಕೇಡಿ’ ಎಂಬ ಶೀರ್ಷಿಕೆ ಕೊಡಲಾಗಿದೆ. ‘D55’ ಚಿತ್ರದ ಚಿತ್ರೀಕರಣ ಇನ್ನು ಆರಂಭವಾಗಿಲ್ಲ. ಅದಕ್ಕೂ ಮುನ್ನವೇ ‘ಕೇಡಿ’ ಚಿತ್ರಕ್ಕೆ ಅವರ ಲುಕ್ ಟೆಸ್ಟ್ ಕೂಡ ಪ್ರೇಮ್ ಅವರು ಮುಗಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ದಿಲ್ಲದೆ ಹೊಸ ಚಿತ್ರದ ಮುಹೂರ್ತ ಮಾಡಿಕೊಂಡಿದ್ದ ಪ್ರೇಮ್ ಅವರು ಟೈಟಲ್ ಲಾಂಚ್ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ಧೂರಿಯಾದ ಟೀಸರ್ ಮೂಲಕ ಸಿನಿಮಾಗೆ ‘ಕೇಡಿ’ ಎಂದು ನಾಮಕರಣ ಮಾಡಿದ್ದಾರೆ. ‘ಕೆ ವಿ ಎನ್ ಪ್ರಾಡಕ್ಷನ್ಸ್’ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಕೂಡ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ರಾಧನಾ ರಾಮ್ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಎಲ್ಲಿಯೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಚಂದನವನದಲ್ಲಿ ಸದ್ದಿಲ್ಲದೆ ಈ ಸುದ್ದಿ ಓಡಾಡುತ್ತಿದೆ. ಒಟ್ಟಿನಲ್ಲಿ ಮೊದಲ ಎರಡೂ ಸಿನಿಮಾಗಳು ಕೂಡ ಸ್ಟಾರ್ ನಟರ ಜೊತೆ ನಟಿಸುತ್ತಿರುವುದರಿಂದ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅವರ ಸಿನಿಪಯಣಕ್ಕೆ ಇದು ಕನಸಿನಂತಿನ ಆರಂಭವಾಗಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ