ಪುಟ್ಟ ಗೌರಿಯಾಗಿ ಕರುನಾಡಿನಾದ್ಯಂತ ಮನೆ ಮಾತಾಗಿರುವ ಸಾನ್ಯಾ ಅಯ್ಯರ್ ಇದೀಗ ಓಟಿಟಿಯಲ್ಲಿಯೂ ಸದ್ದು ಮಾಡುತ್ತಿದ್ದಾರೆ ಕಣ್ರೀ.. ಹೌದು. ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಒಂದಾದ ಬಿಗ್ ಬಾಸ್ ನ ಓಟಿಟಿ ಸೀಸನ್ ಈ ಬಾರಿಯಿಂದ ಶುರುವಾಗಿದ್ದು ಅದರಲ್ಲಿ ಸ್ಪರ್ಧಿಯಾಗಿ ಪುಟ್ಟ ಗೌರಿ ಕಾಣಿಸಿಕೊಂಡಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕಿ ಪುಟ್ಟ ಗೌರಿಯಾಗಿ ನಟಿಸಿ ಕರ್ನಾಟಕದಾದ್ಯಂತ ಹೊಸ ಹವಾ ಸೃಷ್ಟಿ ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಬಿಗ್ ಬಾಸ್ ಮೂಲಕ ಸುದ್ದಿಯಲ್ಲಿದ್ದಾರೆ.

ಬಾಲಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾನ್ಯಾ ಅಯ್ಯರ್ ಕೈ ಹಿಡಿದದ್ದು ಪುಟ್ಟ ಗೌರಿ ಮದುವೆ ಎಂದರೆ ತಪ್ಪಲ್ಲ. ಪುಟ್ಟ ಗೌರಿ ಮದುವೆ ಧಾರಾವಾಹಿ ಮುಗಿದು ವರ್ಷಗಳಾಗುತ್ತಾ ಬಂದರೂ ಜನ ಇಂದಿಗೂ ಅವರನ್ನು ಗುರುತಿಸುವುದು ಪುಟ್ಟ ಗೌರಿಯಾಗಿ. ಅಷ್ಟರ ಮಟ್ಟಿಗೆ ಆ ಪಾತ್ರ, ಸಾನ್ಯಾ ಅವರ ಅಭಿನಯ ವೀಕ್ಷಕರನ್ನು ಸೆಳೆದುಬಿಟ್ಟಿತ್ತು.

ಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸಾನ್ಯಾ ಸಿಂಧೂರ, ಕುಸುಮಾಂಜಲಿ ಧಾರಾವಾಹಿಯಲ್ಲಿ ನಟಿಸಿದ್ದರು. ಮುಂದೆ ಅರಸಿ ಧಾರಾವಾಹಿಯಲ್ಲಿ ರಶ್ಮಿ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದ ಸಾನ್ಯಾ ಅಯ್ಯರ್ ಅಲ್ಲಿ ಖಳನಾಯಕಿ ಕಾಣಿಸಿದ್ದು ವಿಶೇಷ. ನಂತರ ಪುಟ್ಟ ಗೌರಿ ಮದುವೆ ಧಾರವಾಹಿಯ ಗೌರಿಯಾಗಿ ಬದಲಾದ ಸಾನ್ಯಾ ಇಂದು ಕರುನಾಡಿನಾದ್ಯಂತ ಗೌರಿಯಾಗಿಯೇ ಚಿರಪರಿಚಿತ.
ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮೋಡಿ ಮಾಡಿದ ಸಾನ್ಯಾ ಗಜ, ಅನು, ಬೆಳಕಿನೆಡೆಗೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ಸಿನಿಮಾದಲ್ಲಿ ಅಭಿನಯಿಸಿರುವ ಸಾನ್ಯಾ ಆ ಸಿನಿಮಾದ ನಟನೆಗೆ ರಾಜ್ಯ ಸರ್ಕಾರ ನೀಡುವ “ಅತ್ಯುತ್ತಮ ಬಾಲನಟಿ ಪ್ರಶಸ್ತಿ” ಕೂಡಾ ಪಡೆದಿದ್ದಾರೆ. ಮಲಯಾಳಂ ನ ಆರಾರೊ ನೀಯಾರೊ ಎನ್ನುವ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿರುವ ಒಂದೆರಡು ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟನೆಯ ಹೊರತಾಗಿ ಡ್ಯಾನ್ಸ್ ನತ್ತ ವಿಶೇಷ ಒಲವು ಹೊಂದಿದ್ದ ಸಾನ್ಯಾ ಅಯ್ಯರ್ ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿಯೂ ಹೆಜ್ಜೆ ಹಾಕಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಜ್ಯೂನಿಯರ್ಸ್ ನ ಭಾಗವಾಗಿದ್ದ ಸಾನ್ಯಾ ಮುಂದೆ ಕಾರಣಾಂತರಗಳಿಂದ ಶೋ ವನ್ನು ಅರ್ಧದಲ್ಲಿಯೇ ಬಿಟ್ಟಿದ್ದರು. ಇದೀಗ ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್ ಸ್ಪರ್ಧಿಯಾಗಿರುವ ಪುಟ್ಟಗೌರಿ ಬಿಗ್ ಬಾಸ್ ಪಟ್ಟವನ್ನು ಗೆಲ್ಲುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ 9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ.