ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನಿಮಾಗಳಲ್ಲಿ ಬಿಡುಗಡೆಗೂ ಮುನ್ನವೇ ಕನ್ನಡಿಗರೆಲ್ಲರಿಗೆ ಚಿರಪರಿಚಿತವಾಗಿದ್ದ ಸಿನಿಮಾ ‘ಲಕ್ಕಿಮ್ಯಾನ್’. ಇದಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಅಪ್ಪು ಅವರು ಈ ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ನಟಿಸಿರುವುದು ನಮಗೆಲ್ಲರಿಗೂ ಗೊತ್ತಿರುವುದೇ.

ಅಪ್ಪು ಅವರ ಅಗಲಿಕೆಯ ನಂತರ ಅವರದೇ ಧ್ವನಿಯಲ್ಲಿ ಅವರನ್ನ ತೆರೆಮೇಲೆ ತರಲ್ಲಿದ್ದೇವೆ ಎಂಬ ಸುದ್ದಿಯಿಂದಲೇ ಚಿತ್ರತಂಡ ಎಲ್ಲರ ಮನಸೆಳೆದಿತ್ತು. ಹಾಗೆಯೇ ಬಿಡುಗಡೆಯ ಬಳಿಕ ಯಶಸ್ವಿಯಾಗಿತ್ತು ಕೂಡ. ಸದ್ಯ ಇಷ್ಟೆಲ್ಲಾ ಖ್ಯಾತಿಯ ‘ಲಕ್ಕಿಮ್ಯಾನ್’ ಒಟಿಟಿ ಪರದೆಯ ಕಡೆಗೆ ಹೆಜ್ಜೆ ಹಾಕಿದೆ.

ಎಸ್ ನಾಗೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕರಾದರೆ, ‘777 ಚಾರ್ಲಿ’ ಸಿನಿಮಾ ಖ್ಯಾತಿಯ ಸಂಗೀತ ಶೃಂಗೇರಿ ಹಾಗು ‘ಕವಲುದಾರಿ’ ಖ್ಯಾತಿಯ ರೋಶನಿ ಪ್ರಕಾಶ್ ಅವರು ನಾಯಕಿಯರಾಗಿ ನಟಿಸಿದ್ದಾರೆ.

ಸಿನಿಮಾದ ಎರಡು ವಿಶೇಷ ಪಾತ್ರಗಳಿಗೆ ಪುನೀತ್ ರಾಜಕುಮಾರ್ ಅವರು ಹಾಗು ಪ್ರಭುದೇವ ಅವರು ಬಣ್ಣ ಹಚ್ಚಿದ್ದಾರೆ. ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರೆಲ್ಲರ ಮೆಚ್ಚುಗೆಗೆ ಪಾತ್ರವಾಗಿ ಉತ್ತಮ ಪ್ರದರ್ಶನ ಕಂಡ ಈ ಚಿತ್ರ ಇದೀಗ ಒಟಿಟಿ ಕಡೆಗೆ ಹೆಜ್ಜೆ ಹಾಕಿದೆ. ಇದೇ ಅಕ್ಟೋಬರ್ 7ನೇ ತಾರೀಕಿನಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ‘ಲಕ್ಕಿಮ್ಯಾನ್’ ಸಿನಿಮಾ ಪ್ರದರ್ಶಿತವಾಗಲಿದೆ.

ಚಿತ್ರಮಂದಿರಗಳಿಗೆ ತೆರಳಿ ಸಿನಿಮಾವನ್ನು ನೋಡುವುದರಿಂದ ವಂಚಿತರಾದವರು ಈ ಮೂಲಕ ಈ ರೋಮ್ಯಾಂಟಿಕ್ ಕಾಮಿಡಿ ಚಿತ್ರವನ್ನು, ಅದರಲ್ಲೂ ಅಪ್ಪು ಅವರು ದೇವರ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಕ್ಟೋಬರ್ 7ರಿಂದ ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಚಿತ್ರತಂಡ ಹೊರಹಾಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ