ಕರುನಾಡು ಕಂಡ ಯುವರತ್ನ, ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪೂರ್ಣಪ್ರಮಾಣದಲ್ಲಿ ನಟಿಸಿರುವಂತಹ ಕೊನೆಯ ಸಿನಿಮಾ ‘ಗಂಧದಗುಡಿ’. ಅಷ್ಟೇ ಅಲ್ಲದೇ ಈ ಚಿತ್ರಕ್ಕೆ ಅಪ್ಪು ಅವರ ಅನಾದಿಕಾಲದ ಕನಸು ಎಂಬ ಹೆಗ್ಗಳಿಕೆ ಕೂಡ ಅಂಟಿಕೊಂಡಿದೆ. ಹೀಗಾಗಿಯೇ ಚಿತ್ರವನ್ನು ಚಿತ್ರಮಂದಿರದ ಪರದೆಗಳ ಮೇಲೆ ಕಾಣಲು ಅಸಂಖ್ಯ ಕನ್ನಡಿಗರು ಹಾತೊರೆದು ಕಾಯುತ್ತಿದ್ದಾರೆ.

ಕರುನಾಡಿನ ವನ್ಯಸಂಪತ್ತನ್ನು ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂಡು ಮಾಡಿರುವ ಈ ಸಿನಿಮಾದಿಂದ ಇದೀಗ ಹೊರಬಿದ್ದಿರುವ ಹೊಸ ಸುದ್ದಿ ಅಭಿಮಾನಿಗಳೆಲ್ಲರ ಆನಂದಕ್ಕೆ ಕಾರಣವಾಗುತ್ತಿದೆ.

ಹೌದು, ಇದೇ ಅಕ್ಟೋಬರ್ 28 ರಂದು ‘ಗಂಧದಗುಡಿ’ ತೆರೆಕಾಣುತ್ತಿರುವ ಸುದ್ದಿ ಎಲ್ಲೆಡೆ ಈಗಾಗಲೇ ಪ್ರಚಲಿತವಾಗಿದೆ. ಸದ್ಯ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. ಇನ್ನೇನು ಬಿಡುಗಡೆಗೆ ಸುಮಾರು ಒಂದು ತಿಂಗಳು ಬಾಕಿ ಇರುವಾಗ, ಈ ‘ಡಾಕ್ಯು-ಡ್ರಾಮಾ’ ಪರಿಯ ಸಿನಿಮಾದ ಟ್ರೈಲರ್ ಬಿಡುಗಡೆಗೆ ದಿನಾಂಕ ಗೊತ್ತುಪಡಿಸಲಾಗಿದೆ.

ಇದೇ ಅಕ್ಟೋಬರ್ 9ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಗುವುದೆಂದು ನಿರ್ಧಾರವಾಗಿದೆ. ಅಪ್ಪು ಅವರು ಅವರದೇ ಪಾತ್ರವಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ಚಿತ್ರದ ನಿರ್ದೇಶಕರಾದ ಅಮೋಘವರ್ಷ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದಲ್ಲಿರಲಿದ್ದು, ನಮ್ಮ ಕನ್ನಡ ನಾಡಿನ ವನ್ಯಜೀವಿ ಸಂಪತ್ತು, ವೈವಿದ್ಯಗಳನ್ನು ಸೆರೆಹಿಡಿದು ಪ್ರೇಕ್ಷಕರಿಗೆ ನೀಡುವ ಪ್ರಯತ್ನವೇ ಈ ‘ಗಂಧದಗುಡಿ’. ಅಪ್ಪು ಅವರ ಬಹುದೊಡ್ಡ ಕನಸಾಗಿದ್ದ ಈ ಪ್ರಯತ್ನ, ಇದೇ ಅಕ್ಟೋಬರ್ 28ರಿಂದ ಬೆಳ್ಳಿತೆರೆ ಏರಲಿದ್ದು, ಅಕ್ಟೋಬರ್ 9ಕ್ಕೆ ಟ್ರೈಲರ್ ಬಿಡುಗಡೆಯಾಗುತ್ತಿದೆ. ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿಯೇ ಸಿನಿಮಾ ನಿರ್ಮಾಣಗೊಂಡಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ