ಮದುವೆಯಾದ ನಾಲ್ಕು ವರ್ಷಗಳ ನಂತರ, ನಟಿ ಪ್ರಿಯಾ ಹಾಸನ್ ‘ರುದ್ರಿ ಎಲ್‌ಎಲ್‌ಬಿ’ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಈ ಚಿತ್ರವನ್ನು ಗುರು ಸವನಪ್ರಿಯಾ ನಿರ್ದೇಶಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ನಟಿ “ ಮದುವೆಯಾದ ನಂತರ ನಾನು ನಟನೆಯಿಂದ ದೂರವಿದ್ದೆ. ಈಗ ನನ್ನ ಮಗನಿಗೆ ಮೂರು ವರ್ಷ ತುಂಬಿದೆ. ಆದ್ದರಿಂದ ನಾನು ರುದ್ರಿ ಎಲ್‌ಎಲ್‌ಬಿಯೊಂದಿಗೆ ಹಿಂತಿರುಗುತ್ತಿದ್ದೇನೆ. ತುಂಬಾ ಸಂತಸವಾಗುತ್ತಿದೆ” ಎಂದು ಹೇಳಿದ್ದಾರೆ.

ಇದರ ಜೊತೆಗೆ ” ನಾನು ಆಕ್ಷನ್ ಪ್ಯಾಕ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದೇನೆ. ಆದರೆ ಈ ಬಾರಿ ಜನರ ಒಳಿತಿಗಾಗಿ ಹೋರಾಡುವ ವಕೀಲೆಯಾಗಿ ನಟಿಸುತ್ತಿದ್ದೇನೆ. ಕೋರ್ಟ್ ರೂಮ್ ದೃಶ್ಯಗಳಿರುವುದರಿಂದ ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇದೆ. ನಾವು ಶೀಘ್ರದಲ್ಲೇ ಶೂಟಿಂಗನ್ನು ಪ್ರಾರಂಭಿಸಲಿದ್ದೇವೆ” ಎಂದರು.

ಇನ್ನು ಇದರ ಜೊತೆಗೆ ರಣಚತುರ್ ಚಿತ್ರದ ಮೂಲಕ ನಿರ್ದೇಶನಕ್ಕೂ ಕೈಹಾಕಿರುವ ಪ್ರಿಯಾ, “ಇದೊಂದು ಆಕ್ಷನ್-ಪ್ಯಾಕ್ಡ್ ಚಿತ್ರ ಮತ್ತು ಪ್ರೇಕ್ಷಕರು ಮತ್ತೊಮ್ಮೆ ನನ್ನನ್ನು ಪೋಲೀಸ್ ಆಗಿ ನೋಡಬಹುದು. ಇದಲ್ಲದೆ ನಾನು ಮಕ್ಕಳ ಮತ್ತು ಭಕ್ತಿ ಪ್ರಧಾನವಾದ ಚಿತ್ರ ಮಹಾಲಕ್ಷ್ಮಿಯನ್ನೂ ನಿರ್ಮಿಸಲಿದ್ದೇನೆ. ಇದು ನನಗೆ ಸಂಪೂರ್ಣವಾಗಿ ಹೊಸದು” ಎನ್ನುತ್ತಾರೆ.

ಇದರೊಂದಿಗೆ ತಾಯ್ತನವನ್ನು ಆನಂದಿಸುತ್ತಿರುವ ನಟಿ, “ತಾಯಿಯಾದ ನಂತರ, ತಾಯ್ತನವಿಲ್ಲದೆ ಮಹಿಳೆಯ ಜೀವನ ಅಪೂರ್ಣ ಎಂಬುದನ್ನು ಅರಿತುಕೊಂಡೆ. ಮಗುವನ್ನು ಬೆಳೆಸುವುದರ ಜೊತೆಗೆ, ನಾವು ಜೀವನದ ಬಗ್ಗೆ ಅನೇಕ ವಿಷಯಗಳನ್ನು ಕಲಿಯುತ್ತೇವೆ. ನಾನು ನನ್ನ ಮಗ ವಾರಾಂತ್ಯದಲ್ಲಿ ನಮ್ಮ ಜಮೀನಿಗೆ ಹೋಗುತ್ತೇವೆ. ಅಲ್ಲಿ ನಾವು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತೇವೆ ಮತ್ತು ಅವನಿಗೆ ಈ ತರದ ಚಟುವಟಿಕೆಗಳು ಒಳ್ಳೆಯದೆಂದು ಭಾವಿಸಿದ್ದೇನೆ. ಅಲ್ಲದೆ ನನ್ನ ತಾಯಿಯನ್ನು ನನ್ನ ಮಗನಲ್ಲಿ ನೋಡುತ್ತೇನೆ ಏಕೆಂದರೆ ಅವಳು ನನ್ನೊಂದಿಗಿಲ್ಲ” ಎಂದು ಭಾವುಕರಾದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ