ನಟ ಪ್ರಜ್ವಲ್ ದೇವರಾಜ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ನವೆಂಬರ್ 18ಕ್ಕೆ ಬಿಡುಗಡೆಯಾಗಿರುವ ‘ಅಬ್ಬರ’, ಸಿನಿಮಾದ ಜೊತೆಗೆ ‘ವೀರಂ’, ‘ಗಾನ’ ಮುಂತಾದ ಸಿನಿಮಾಗಳಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ. ಇವುಗಳೆಲ್ಲದರ ನಡುವೆ ಸದ್ಯ ಹೆಚ್ಚು ಸದ್ದು ಮಾಡುತ್ತಿರುವುದು ಲೋಹಿತ್ ಹೆಚ್ ಅವರ ನಿರ್ದೇಶನದ ‘ಮಾಫಿಯಾ’ ಸಿನಿಮಾ. ಇದೊಂದು ಪಕ್ಕ ಆಕ್ಷನ್ ಎಂಟರ್ಟೈನರ್ ಆಗಿರಲಿದ್ದು, ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ಇದೆ ನಟ ನಿರ್ದೇಶಕರ ಜೋಡಿ ಇನ್ನೊಂದು ಸಿನಿಮಾವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಜೊತೆಗೆ ಅದಿತಿ ಪ್ರಭುದೇವ, ಶೈನ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿರುವ ‘ಮಾಫಿಯಾ’ ಸಿನಿಮಾದ ನಿರ್ದೇಶಕರಾಗಿರುವ ಲೋಹಿತ್ ಹೆಚ್ ಅವರು ಬರೆದಿರುವಂತಹ ಈ ಹೊಸ ಕಥೆ ಹಿಂದಿನ ಚಿತ್ರದಂತೆ ಆಕ್ಷನ್ ಸಿನಿಮಾ ಆಗಿರುವುದಿಲ್ಲ. ಬದಲಾಗಿ ಇದೊಂದು ಹಾರರ್ ಥ್ರಿಲರ್ ಬಗೆಯ ಸಿನಿಮಾವಾಗಿರಲಿದೆ.

“ಮಾಫಿಯಾ ಸಿನಿಮಾದಲ್ಲಿ ಕೆಲಸ ಮಾಡುವಾಗ ನಾನು ಲೋಹಿತ್ ಅವರ ಕಾರ್ಯವೈಖರಿಯನ್ನ ಮೆಚ್ಚಿದ್ದೆ. ಅದಕ್ಕಾಗಿಯೇ ಅವರೊಂದಿಗೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಇದೊಂದು ಹಾರರ್ ಥ್ರಿಲರ್ ಆಗಿದ್ದು ಟೈಮ್ ಲೂಪ್ ನ ಬಗ್ಗೆಯೂ ಕಥೆಯಲ್ಲಿದೆ” ಎನ್ನುತ್ತಾರೆ ಪ್ರಜ್ವಲ್ ದೇವರಾಜ್.

ಇದರ ಜೊತೆಗೆ “ಕಥೆಯು ಹೊಸತಾಗಿದೆ. ಜೊತೆಗೆ ನನ್ನ ಪಾತ್ರ ಕೂಡ ವಿಭಿನ್ನವಾದದ್ದು, ಹಾಗಾಗಿಯೇ ಲೋಹಿತ್ ಕಥೆಯ ಸಾರಾಂಶ ಹೇಳಿದಾಗಲೇ ನಾನು ಒಪ್ಪಿಕೊಂಡಿದ್ದೆ. ಚಿತ್ರಕ್ಕಾಗಿ ನನ್ನ ಲುಕ್ ಬದಲಿಸಲು ನಿರ್ದೇಶಕರು ನಿರ್ಧರಿಸಿದ್ದಾರೆ. ಕಥೆಗೆ ಸಂಬಂಧಪಟ್ಟ ರಿಸರ್ಚ್ ಗಳು ಕೂಡ ನಡೆಯುತ್ತಲೇ ಇವೆ ” ಎಂದು ಹೇಳುತ್ತಾರೆ ಪ್ರಜ್ವಲ್ ದೇವರಾಜ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ