ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಸಾಧಾರಣ ಎಲ್ಲರಿಗೂ ಪರಿಚಿತರು. ಇವರು ಕನ್ನಡಕ್ಕೂ ಹೊಸಬರೇನಲ್ಲ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಜೊತೆಗೆ ‘ಪವರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಈಗ ಇವರು ಸುದ್ದಿಯಲ್ಲಿರುವ ವಿಷಯವೆಂದರೆ ತ್ರಿಶಾ ಸೇರಿದಂತೆ ಹಲವು ದೊಡ್ಡ ಸ್ಟಾರ್‌ಗಳು ನಟಿಸಿರುವ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಕೈಗೊಂಡಿರುವ ಚಿತ್ರತಂಡ ಇದರ ಭಾಗವಾಗಿ ಬೆಂಗಳೂರಿಗೆ ಆಗಮಿಸಿತ್ತು.

ಪುನೀತ್ ರಾಜಕುಮಾರ್ ನಿಧನದ ನಂತರ ತ್ರಿಷಾ ಹಲವಾರು ಬಾರಿ ನಟರನ್ನು ನೆನೆಸಿಕೊಂಡಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ನಟಿ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳುವುದನ್ನು ಮರೆಯಲಿಲ್ಲ. ”ನಾನು ಈ ಹಿಂದೆ ‘ಪವರ್’ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ನಾನು ಕೆಲ ದಿನಗಳ ಇಲ್ಲಿ ಚಿತ್ರೀಕರಣ ನಡೆಸಿದ್ದೆ. ನಾನು ಪುನೀತ್ ರಾಜ್‌ಕುಮಾರ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.

”ಪುನೀತ್ ರಾಜ್‌ಕುಮಾರ್ ಹಾಗೂ ನಾನು ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಇಬ್ಬರೂ ಒಟ್ಟಿಗೆ ‘ದ್ವಿತ್ವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ವೇಳೆಗೆ ದುರ್ಘಟನೆ ನಡೆಯಿತು. ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶವನ್ಶು ನಾನು ಕಳೆದುಕೊಂಡೆ. ಈಗಲೂ ನಾನು ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೃದಯ ಒಡೆದಿದೆ. ಅವರ ನೆನಪು ಸದಾ ನನ್ನೊಂದಿಗೆ ಹಾಗೆಯೇ ಉಳಿಯಲಿದೆ” ಎಂದರು.

ಬೆಂಗಳೂರಿನ ಬಗ್ಗೆಯೂ ಪ್ರೀತಿಯಿಂದ ಮಾತನಾಡಿದ ತ್ರಿಶಾ, ”ಇದು ನನಗೆ ಎರಡನೇ ಮನೆ ಇದ್ದಂತೆ. ನಾನು ಸಣ್ಣವಳ್ಳಿದ್ದಾಗ ಸಾಕಷ್ಟು ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ. ಇಲ್ಲಿನ ಆಹಾರ ಹಾಗೂ ವಾತಾವರಣ ನನಗೆ ತುಂಬಾ ಇಷ್ಟ. ಈಗಲೂ ನನಗೆ ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವುದು ಇಷ್ಟವಾಗುವುದಿಲ್ಲ. ಚೆನ್ನೈಯಿಂದ ಬೆಂಗಳೂರಿಗೆ ಕಾರು ಸವಾರಿಯೇ ಇಷ್ಟ” ಎಂದಿದ್ದಾರೆ.

ಅಂತೆಯೇ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಬಗ್ಗೆ ಮಾತನಾಡಿದ ತ್ರಿಶಾ, ”ಇಂತಹ ಅದ್ಭುತವಾದ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಮಣಿರತ್ನಂ ಅವರಿಗೆ ಧನ್ಯವಾದ. ಇದೇ ಮೊದಲ ಬಾರಿಗೆ ನಾನು ರಾಣಿಯ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಪಾತ್ರದ ಹೆಸರು ಕುಂದವ. ಸಿನೆಮಾ ಚೆನ್ನಾಗಿ ಬಂದಿದೆ ಎಂಬುದು ನಮ್ಮ ನಂಬಿಕೆ. ನಮಗೆಲ್ಲರಿಗೂ ಈ ಸಿನಿಮಾದ ಮೇಲೆ ನಂಬಿಕೆ ಇದೆ. ದಯವಿಟ್ಟು ನೀವುಗಳೂ ಸಿನಿಮಾವನ್ನು ನೋಡಿ ಆನಂದಿಸಿ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ