ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಗೂಗ್ಲಿ’ ಸಿನಿಮಾ ಯಾರಿಗೇ ಗೊತ್ತಿಲ್ಲ! ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾಗಳಲ್ಲಿ ‘ಗೂಗ್ಲಿ’ ಕೂಡ ಒಂದು. ಸದ್ಯ ಅದರ ನಿರ್ದೇಶಕರಾದ ಪವನ್ ಒಡೆಯರ್ ಅವರು ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್ ವುಡ್ ಗೆ ‘ಗೂಗ್ಲಿ’ಯ ಜೊತೆಗೆ ಪುನೀತ್ ರಾಜಕುಮಾರ್ ಅಭಿನಯದ ‘ಚಕ್ರವ್ಯೂಹ’,’ನಟಸಾರ್ವಭೌಮ’ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಇದೀಗ ಬಾಲಿವುಡ್ ನಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ.

ಪವನ್ ಒಡೆಯರ್ ಅವರ ಮುಂದಿನ ಸಿನಿಮಾ ಬಾಲಿವುಡ್ ನಲ್ಲಿ ಮೂಡಿಬರಲಿದೆ. ಅಕ್ಟೋಬರ್ 5ರ ‘ಆಯುಧ ಪೂಜೆ’ಯಂದು ಸೆಟ್ಟೇರಿದ ಈ ಚಿತ್ರ ಅಕ್ಟೋಬರ್ 6ರಿಂದ ತನ್ನ ಚಿತ್ರೀಕರಣ ಆರಂಭಿಸಿಕೊಂಡಿದೆ. ಈ ಸಿನಿಮಾಗೆ ‘ನೋಟರಿ’ ಎಂದು ಹೆಸರಿಡಲಾಗಿದ್ದು, ಪವನ್ ಒಡೆಯರ್ ಅವರೇ ಬರೆದ ಕಥೆ ಇದಾಗಿದೆ.

ಸುಳ್ಳನ್ನೇ ಹೇಳುವುದಿಲ್ಲ ಎಂಬ ಆದರ್ಶ ಇಟ್ಟುಕೊಂಡ ಒಬ್ಬ ವ್ಯಕ್ತಿ ಸುಳ್ಳು ಹೇಳಲೇಬೇಕಾದ ಸಂಧರ್ಭ ಬಂದಾಗ ಏನೆಲ್ಲಾ ಆಗಬಹುದು ಎಂಬ ಹಾಸ್ಯಬರಿತ ಕಥಾವಸ್ತು ಈ ಚಿತ್ರದ್ದು ಎಂಬ ಸುದ್ದಿಯಿದೆ. ಮುಂಬೈ ಮೂಲದ ತಶಾ ಭಂಬ್ರಾ ಹಾಗೂ ಸ್ಪರ್ಶ್ ಖೆಟರ್ ಪಾಲ್ ಈ ಕಥೆಗೆ ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯ ಭೋಪಾಲ್ ನಲ್ಲಿ ನಡೆಯುತ್ತಿದ್ದೂ, ನಂತರ ಮುಂಬೈ ನಲ್ಲಿ ಮುಂದುವರಿಸುವ ತಯಾರಿಯಲ್ಲಿದ್ದಾರೆ.

ಪವನ್ ಒಡೆಯರ್ ಅವರ ಈ ಹೊಸ ‘ನೋಟರಿ’ ಸಿನಿಮಾದಲ್ಲಿ ಬೆಂಗಾಲಿ ಹಾಗು ಹಿಂದಿ ಭಾಷೆಯಲ್ಲಿ ಪ್ರಸಿದ್ದರಾಗಿರುವ ನಟ ಪರಂಬ್ರತ ಚಟ್ಟೋಪಾಧ್ಯಾಯ ಅವರು ನಾಯಕರಾಗಿ, ಹಾಗೆಯೇ ಅವರಿಗೆ ಜೋಡಿಯಾಗಿ ಗೀತಾ ಬಸ್ರಾ ಅವರು ನಟಿಸಲಿದ್ದಾರೆ. ಇವರ ಜೊತೆಗೆ ಮೋಹನ್ ಅಗಾಶೆ,ದಲಿಪ್ ತಾಹಿಲ್,ಮನೋಜ್ ಜೋಶಿ,ಸಹರ್ಶ್ ಶುಕ್ಲಾ ಮತ್ತು ಇತರರು ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಹಿಟ್ ಸಿನಿಮಾಗಳ ನಿರ್ದೇಶನ ಮಾತ್ರವಲ್ಲದೆ, ‘ಡೊಳ್ಳು’ ರೀತಿಯ ವಿಶಿಷ್ಟ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಮೂಲಕ ಒಬ್ಬ ಒಳ್ಳೆ ನಿರ್ಮಾಪಕ ಕೂಡ ಹೌದು ಎನಿಸಿಕೊಂಡಿರುವ ಪವನ್ ಅವರು ತಮ್ಮ ಮೊದಲ ಬಾಲಿವುಡ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಮೇಲೆ ತರಲು ಸಿದ್ದರಾಗುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ