ಇಂಜಿನಿಯರಿಂಗ್ ಪದವಿ ಪಡೆದಿರುವ ಚಿಕ್ಕಮಗಳೂರಿನ ತರೀಕೆರೆಯ ಶ್ರುತಿ ರಮೇಶ್ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡ ಹುಡುಗಿ. ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿಯೇ ಶ್ರುತಿ ರಮೇಶ್ ಕಾಣಿಸಿಕೊಂಡಿದ್ದರೂ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದಾರೆ. ಕಲರ್ಸ್
ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಲಕ್ಷಣ”ದಲ್ಲಿ ಖಳನಾಯಕಿ ಶ್ವೇತಾಳ ಪರ್ಸನಲ್ ಅಸಿಸ್ಟೆಂಟ್ ಮಿಲಿ ಪಾತ್ರಕ್ಕೆ ಜೀವ ತುಂಬುತ್ತಿರುವ ಶ್ರುತಿ ರಮೇಶ್ ಅವರಿಗೆ ಹೆಸರು ತಂದುಕೊಟ್ಟಿದ್ದು ಪಾಪಾ ಪಾಂಡು ಸೀಸನ್ 2 ಧಾರಾವಾಹಿ.
ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ, ಸಿಹಿ ಕಹಿ ಚಂದ್ರು ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ ಪಾಪಾ ಪಾಂಡು ಸೀಸನ್ 2 ರಲ್ಲಿ ನಿಮ್ಮಿ ಆಗಿ ಅಭಿನಯಿಸಿದ್ದ ಶ್ರುತಿ ರಮೇಶ್ ಕೇವಲ ಕಡಿಮೆ ಅವಧಿಯಲ್ಲಿಯೇ ಕಿರುತೆರೆ ಎನ್ನುವ ಪುಟ್ಟ ಜಗತ್ತಿನಲ್ಲಿ ಪ್ರಖ್ಯಾತಿಯನ್ನು ಪಡೆದರು. ಪಾಪಾ ಪಾಂಡು ಸೀಸನ್ 2 ಮುಗಿದು ವರ್ಷ ಎರಡಾಗುತ್ತಾ ಬಂದರೂ ಜನ ಇಂದಿಗೂ ಅವರನ್ನು ಗುರುತಿಸುವುದು ” ನಿಮ್ಮಿ”ಯಾಗಿ. ಅಷ್ಟರ ಮಟ್ಟಿಗೆ ಆ ಪಾತ್ರ ಜನರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿತ್ತು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮೀ ಸಂಸಾರ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ, ಸ್ಟಾರ್ ಸುವರ್ಣ ವಾಹಿನಿಯ ಬಿಳಿ ಹೆಂಡ್ತಿ, ಉದಯ ವಾಹಿನಿಯ ಮಾನಸ ಸರೋವರ ಧಾರಾವಾಹಿ ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಮೋಡಿ ಸೈ ಎನಿಸಿಕೊಂಡ ಶ್ರುತಿ ರಮೇಶ್ ಮೊದಲ ಬಾರಿಗೆ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪಾಪಾ ಪಾಂಡು ಸೀಸನ್ ರಲ್ಲಿ.
“ನಾನು ಪ್ರಮುಖ ಪಾತ್ರದಲ್ಲಿ ನಟಿಸಿದ ಮೊದಲ ಧಾರಾವಾಹಿ ಪಾಪಾ ಪಾಂಡು. ಪಾಪಾ ಪಾಂಡು ಧಾರಾವಾಹಿಯ ಮೊದಲು ನಾನು ಬೇರೆ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ನಿಮ್ಮಿ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ಸಂತೋಷಕ್ಕಿಂತ ಭಯ ಆಗಿದ್ದೇ ಹೆಚ್ಚು. ನನ್ನಿಂದ ಇದು ಸಾಧ್ಯನಾ ಎಂಬ ಭಯ ಸಹಜವಾಗಿ ಕಾಡಿತ್ತು. ದೊಡ್ಡವರಿಂದ ಹಿಡಿದು ಮಕ್ಕಳು ಕೂಡಾ ಈ ಪಾತ್ರವನ್ನು ಮೆಚ್ಚಿಕೊಂಡಾಗ ಪಾತ್ರ ಒಪ್ಪಿಕೊಂಡಿದ್ದು ಸಾರ್ಥಕ ಎಂದೆನಿಸಿತು” ಎಂದು ಹೇಳುತ್ತಾರೆ ಶ್ರುತಿ ರಮೇಶ್.

ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿರುವ ಶ್ರುತಿ ಪ್ರಕಾಶ್ ಅವರ ಹಿರಿತೆರೆ ಪಯಣ ಶುರುವಾಗಿದ್ದು ಫ್ಯಾಮಿಲಿ ಪ್ಯಾಕ್ ಸಿನಿಮಾ ಮೂಲಕ. ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ಮೂಡಿಬಂದ ಫ್ಯಾಮಿಲಿ ಫ್ಯಾಕ್ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ ಶ್ರುತಿ ರಮೇಶ್. ಇದರ ಬಗ್ಗೆ ಮಾತನಾಡಿದ ಶ್ರುತಿ ರಮೇಶ್ “ಪಿಆರ್ ಕೆ ಪ್ರೊಡಕ್ಷನ್ ನ ಫ್ಯಾಮಿಲಿ ಪ್ಯಾಕ್ ಸಿನಿಮಾ ಮೂಲಕ ನನ್ನ ಬೆಳ್ಳಿತೆರೆ ಪಯಣ ಆರಂಭವಾಯಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ನಿಂದ ನನ್ನ ಹಿರಿತೆರೆ ಪಯಣ ಶುರುವಾಗಿದ್ದು ನನ್ನ ಪುಣ್ಯ” ಎಂದು ಹೇಳುತ್ತಾರೆ.
ಇದರ ಜೊತೆಗೆ ಪೃಥ್ವಿಅಂಬರ್ ನಿರ್ದೇಶನದ ಶುಗರ್ ಲೆಸ್ ಸಿನಿಮಾದಲ್ಲಿಯೂ ಬಣ್ಣ ಹಚ್ಚಿರುವ ಶ್ರುತಿ ರಮೇಶ್ ಜೆರ್ಸಿ ನಂ 1, ಸಿರಿ ಲಂಬೋದರ ವಿವಾಹ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.