ಉನ್ನತ ಕಮಾಂಡರ್ ಸೇರಿದಂತೆ 6 ಸಿಬ್ಬಂದಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಸೇನೆಯ (Pakistan Army) ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ ಖಚಿತಪಡಿಸಿದೆ. ದೇಶದ ಪ್ರವಾಹ ಪೀಡಿತ ಪ್ರದೇಶವಾದ ನೈಋತ್ಯ ಭಾಗದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಸೇನಾ ಹೆಲಿಕಾಪ್ಟರ್ (Army Helicopter) ಹಾರಾಟ ನಡೆಸುತ್ತಿತ್ತು. ಈ ವೇಳೆ ಪ್ರಾದೇಶಿಕ ಕಂಟ್ರೋಲ್ ಟವರ್ ಸಂಪರ್ಕ ಕಳೆದುಕೊಂಡಿದ್ದು, ನಾಪತ್ತೆಯಾಗಿದೆ ಎಂದು ಸೇನೆ ತಿಳಿಸಿದೆ.
ಹೆಲಿಕಾಪ್ಟರ್ನಲ್ಲಿ XII ಕಾರ್ಪ್ಸ್ನ ಕಮಾಂಡರ್ ಜನರಲ್ ಸರ್ಫರಾಜ್ ಅಲಿ ಮತ್ತು ಇತರ ಐವರು ಹಿರಿಯ ಸೇನಾ ಅಧಿಕಾರಿಗಳು ಬಲೂಚಿಸ್ತಾನದಲ್ಲಿ ನಡೆಸಲಾಗುತ್ತಿರುವ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ಟ್ವಿಟ್ಟರ್ನಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳ ISPRನ ಮಾಧ್ಯಮ ವಿಭಾಗ ಹೇಳಿದೆ.
ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿದ್ದ ಪಾಕಿಸ್ತಾನ ಸೇನೆಯ ವಾಯುಯಾನದ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ. ಬಲೂಚಿಸ್ತಾನದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಕಮಾಂಡರ್ 12 ಕಾರ್ಪ್ಸ್ ಸೇರಿದಂತೆ ಆರು ವ್ಯಕ್ತಿಗಳು ವಿಮಾನದಲ್ಲಿದ್ದರು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಲಾಗಿದೆ.
ಹೆಲಿಕಾಪ್ಟರ್ ಏರ್ ಟ್ರಾಫಿಕ್ ಕಂಟೋಲ್ (ಎಟಿಸಿ) ನೊಂದಿಗೆ ಸಂಪರ್ಕ ಕಳೆದುಕೊಂಡು ಕಳೆದ 5 ಗಂಟೆಗಳಿಂದ ನಾಪತ್ತೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿಗಳು ತಿಳಿಸಿವೆ.