ಕನ್ನಡ ಚಿತ್ರರಂಗ ಹಲವು ಮೆಟ್ಟಿಲುಗಳನ್ನ ಏರುತ್ತಿದೆ. ವಿವಿಧ ವಿಧಗಳ ಚಿತ್ರಗಳಿಗೆ ನಮ್ಮ ಸ್ಯಾಂಡಲ್ ವುಡ್ ಸಾಕ್ಷಿಯಾಗುತ್ತಿದೆ. ಹೊರ ರಾಜ್ಯಗಳ ಚಿತ್ರರಂಗಗಳ ದೃಷ್ಟಿ ನಮ್ಮ ಚಿತ್ರರಂಗದ ಮೇಲೆ ನೆಟ್ಟಿದೆ. ಇತ್ತೀಚೆಗೆ ಬಂದ ‘ಕೆಜಿಎಫ್’,’777 ಚಾರ್ಲಿ’ ‘ಕಾಂತಾರ’ದಂತಹ ಸಿನಿಮಾಗಳು ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸುತ್ತಿವೆ. ಹೊರಚಿತ್ರರಂಗಗಳ ಹೆಸರಾಂತ ಕಲಾವಿದರು ನಮ್ಮ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ತೆಲುಗಿನ ಹೆಸರಾಂತ ನಟಿ ಪಾಯಲ್ ರಜಪೂತ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಶೂನ್ಯ ಅವರ ನಿರ್ದೇಶನದ, ‘ನಟರಾಕ್ಷಸ’ ಡಾಲಿ ಧನಂಜಯ ಅವರ ಅಭಿನಯದ ‘ಹೆಡ್ ಬುಷ್’ ಸಿನಿಮಾದ ಮೂಲಕ ಪಾಯಲ್ ರಜಪೂತ್ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. “ನಾನು ನನ್ನ ಸಿನಿಪಯಣ ಆರಂಭಿಸಿದ್ದು ಪಂಜಾಬಿ ಚಿತ್ರದಿಂದ. ಅದಕ್ಕಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. ನಂತರ ತೆಲುಗಿನ ‘ಆರ್ ಎಕ್ಸ್ 100’ ಚಿತ್ರದ ಮೂಲಕ ಹಲವು ಸಿನಿಪ್ರೇಮಿಗಳಿಗೆ ನನ್ನ ಪರಿಚಯವಾಯಿತು. ಜೊತೆಗೆ ಕೆಲವು ತಮಿಳು ಸಿನಿಮಾಗಳಲ್ಲೂ ನಟಿಸಿದ್ದೇನೆ. ಇದೀಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದೇನೆ. ಆದಷ್ಟು ಬೇಗ ಮಲಯಾಳಂ ಚಿತ್ರರಂಗಕ್ಕೂ ಸೇರುವ ಆಸೆಯಿದೆ. ಬೇರೆ ಬೇರೆ ಸಿನಿರಂಗದಲ್ಲಿ ಕೆಲಸ ಮಾಡುತ್ತಾ ಹೆಚ್ಚು ಜನರಿಗೆ ತಲುಪುವುದು ನನ್ನ ಆಸೆ”ಎನ್ನುತ್ತಾರೆ ಪಾಯಲ್.

ಇನ್ನು ‘ಹೆಡ್ ಬುಷ್’ ಚಿತ್ರದ ಬಗ್ಗೆ ಮಾತನಾಡುವ ಇವರು,”ಕನ್ನಡದಲ್ಲಿ ಧನಂಜಯ ಅವರ ಜನಪ್ರಿಯತೆ ಬಗ್ಗೆ ನನಗೆ ತಿಳಿದಿತ್ತು. ಚಿತ್ರದಲ್ಲಿ ನನ್ನ ಪಾತ್ರ ಬೆಂಗಳೂರಿನಲ್ಲಿ ನೆಲೆಸಿರುವಂತಹ ಒಬ್ಬ ಪಂಜಾಬಿ ಹುಡುಗಿಯದು. ಹಾಗಾಗಿಯೇ, ನಾನು ಪಂಜಾಬಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಕಾರಣದಿಂದ, ನನ್ನನ್ನು ಚಿತ್ರದ ನಟ-ನಿರ್ಮಾಪಕರಾದ ಧನಂಜಯ ಅವರು ಈ ಪಾತ್ರಕ್ಕಾಗಿ ಸಂಪರ್ಕಿಸಿದ್ದರು. ಅರ್ಧಂಬರ್ದ ಕನ್ನಡ ಮಾತಾಡುವ ಈಕೆ ಜಯರಾಜ್ ಅವರನ್ನು ಇಷ್ಟ ಪಡುತ್ತಿರುತ್ತಾಳೆ. ಈ ಚಿತ್ರಕ್ಕೆ ನಾನೇ ಡಬ್ ಮಾಡಿದ್ದೇನೆ. ಇದು ಅಗ್ನಿ ಶ್ರೀಧರ ಅವರು ಬರೆದ ಆತ್ಮಕತೆಯ ಆಧರಿತ ಚಿತ್ರವಾದ್ದರಿಂದ ನೈಜ ಪಾತ್ರವೊಂದನ್ನು ಜೀವಿಸುವ ಅವಕಾಶ ಸಿಕ್ಕಿತು. ಇದು ಒಂದು ಕಾಲ್ಪನಿಕ ಪಾತ್ರದಲ್ಲಿ ನಟಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ. ಈ ಪಾತ್ರಕ್ಕಾಗಿ ತುಂಬಾ ಹೋಂ ವರ್ಕ್ ಮಾಡಿದ್ದೇನೆ. ಜಯರಾಜ್ ಅವರ ಪಾತ್ರದ ಬಗೆಗೂ ಹೆಚ್ಚಿಗೇ ತಿಳಿದುಕೊಂಡಿದ್ದೇನೆ. ನಾನು ನಟಿಸುತ್ತಿದ್ದ ಪಾತ್ರದವರು ಜೀವಂತವಾಗಿದ್ದಾರೆ ಎಂಬ ವಿಷಯ ಕೇಳಿಬಂತು. ಅವರನ್ನ ಭೇಟಿಯಾಗಬೇಕು ಎಂದು ಕೂಡ ಪ್ರಯತ್ನಿಸಿದೆ ಆದರೆ ಅದಾಗಲಿಲ್ಲ. ಆದರೆ ಧನಂಜಯ ಹಾಗು ಲೇಖಕರಾದ ಅಗ್ನಿ ಶ್ರೀಧರ್ ಅವರ ಜೊತೆ ಸಮಾಲೋಚಿಸಿ ಹೆಚ್ಚಿನ ತಯಾರಿ ಮಾಡಿಕೊಂಡಿದ್ದೆ. ಲೇಖಕರ ಬಗ್ಗೆ ನನಗೆ ಅಪಾರ ಗೌರವವಿದೆ.” ಎಂದಿದ್ದಾರೆ.

ಅಪ್ಪುವನ್ನು ಭೇಟಿಯಾದ ಆ ಕ್ಷಣ
“ಹೆಡ್ ಬುಷ್’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡುವ ಭಾಗ್ಯ ಸಿಕ್ಕಿತ್ತು. ನನ್ನ ಸ್ಯಾಂಡಲ್ ವುಡ್ ಪ್ರವೇಶದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದರು ಎನ್ನುತ್ತಾರೆ ಪಾಯಲ್. ಇನ್ನೂ ಧನಂಜಯ ಅವರ ಬಗ್ಗೆ ಮಾತನಾಡುವ ಅವರು “ಧನಂಜಯ ಅವರು ಒಬ್ಬ ಅದ್ಭುತ ನಟ, ಹಾಗೆಯೇ ಒಬ್ಬ ಅದ್ಭುತ ಸ್ನೇಹಿತ. ಅವರೊಂದಿಗೆ ಕೆಲಸ ಮಾಡಿದ್ದು ಒಂದೊಳ್ಳೆ ಅನುಭವ. ನಾನು ಅವರಿಂದ ತುಂಬಾ ಕಲಿತೆ. ಅವರೊಂದಿಗಿನ ಸ್ನೇಹ ಕೊನೆಯವರೆಗೆ ಇರುತ್ತದೆ ಎಂಬ ನಂಬಿಕೆ ನನಗಿದೆ” ಎನ್ನುತ್ತಾರೆ ಪಾಯಲ್ ರಜಪೂತ್.

ಡಾಲಿ ಧನಂಜಯ ಅವರು ನಟಿಸಿ ನಿರ್ಮಿಸಿರುವ ಈ ‘ಹೆಡ್ ಬುಷ್’ ಸಿನಿಮಾ ಇದೆ ಅಕ್ಟೋಬರ್ 21ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಧನಂಜಯ ಅವರ ಜೊತೆಗೆ ರಘು ಮುಖರ್ಜಿ, ವಸಿಷ್ಠ, ಯೋಗಿ, ಪಾಯಲ್ ರಜಪೂತ್, ಶೃತಿ ಹರಿಹರನ್, ದೇವರಾಜ್ ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಈಗಾಗಲೇ ಬಿಡುಗಡೆಯಾದ ಟ್ರೈಲರ್ ಎಲ್ಲೆಡೆ ಪ್ರಶಂಸೆ ಪಡೆಯುತ್ತಿದ್ದು, ಪ್ರೀಮಿಯರ್ ಶೋ ಗಳು ಸಹ ಉತ್ತಮ ಬೇಡಿಕೆ ಪಡೆಯುತ್ತಿವೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ