ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡವೂ ಒಂದು. ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ ವಾಹಿನಿಯು ಸಿಹಿ ಸುದ್ದಿ ನೀಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಯಕಿ ಪ್ರಧಾನ ಧಾರಾವಾಹಿ ಪಾರು ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ.

ಕಳೆದ ಮೂರು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯು ಸಾವಿರ ಸಂಚಿಕೆ ಪೂರೈಸಿದ್ದು ಸೀರಿಯಲ್ ವೀಕ್ಷಕರಿಗೆ ಸಂತಸ ತಂದಿದೆ. ಇನ್ನು ಪಾರು ಧಾರಾವಾಹಿಯಲ್ಲಿ ನಾಯಕ ಆದಿತ್ಯ ಹಾಗೂ ನಾಯಕಿ ಪಾರು ಆಗಿ ಅಭಿನಯಿಸುತ್ತಿರುವ ಶರತ್ ಪದ್ಮನಾಭನ್ ಹಾಗೂ ಮೋಕ್ಷಿತಾ ಪೈ ಅವರು ಪಾರು ವೀಕ್ಷಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಪಾರು ಧಾರಾವಾಹಿಯ ವಿಡಿಯೋದ ತುಣುಕೊಂದನ್ನು ಹಂಚಿಕೊಂಡಿರುವ ಶರತ್ ಪದ್ಮನಾಭನ್ ಎಲ್ಲರಿಗೂ ನಮಸ್ಕಾರ!! ಇಂದಿಗೆ ನಮ್ಮ ಪಾರು ಧಾರಾವಾಹಿ 1000 ಕಂತುಗಳನ್ನು ಪೂರೈಸಿದೆ!! ನಮಗೆ ನೀವು ಕೊಟ್ಟ ಪ್ರೀತಿ ಪ್ರೋತ್ಸಾಹಕ್ಕೆ ನಾವೆಂದೂ ಆಭಾರಿ!! ನಮಗೆ ಕೊಟ್ಟ ಎಲ್ಲ ಸ್ಟಾಟ್ನಲ್ಲು ನಂ 1 ಆಗಿ ಈ ಮೈಲಿಗಲ್ಲು ತಲುಪಿದ್ದೇವೆ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತಿದೆ. ಇಂದಿಗೂ ಆದೆ ಕುತೂಹಲವನ್ನು ಕಾಪಾಡಿಕೊಂಡು ಜನರ ಪ್ರೀತಿ ಗಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಪಾರೂ ತಂಡದಿಂದ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇನ್ನು ಮೋಕ್ಷಿತಾ ಪೈ “ನಿಮ್ಮ ಪ್ರೀತಿಯ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ. ನಿಮ್ಮ ಅಭಿಮಾನ, ಹಾರೈಕೆ ನಿರಂತರವಾಗಿರಲಿ!” ಎಂದು ಚೊಕ್ಕದಾಗಿ ಬರೆದುಕೊಂಡಿದ್ದಾರೆ.

ಅಡುಗೆ ಕೆಲಸಗಾರ್ತಿಯಾಗಿ ಅರಸನಕೋಟೆಗೆ ಕಾಲಿಟ್ಟ ಪಾರು ಮನೆಮಂದಿಯ ಓಳಿತನ್ನಷ್ಟೇ ಬಯಸುತ್ತಿದ್ದಳು. ಏನೇ ಆದರೂ ಸರಿ, ಅರಸನಕೋಟೆಗೆ, ಅಖಿಲಾಂಡೇಶ್ವರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ಪಾರು ಸದಾ ಕಾಲ ನೋಡಿಕೊಳ್ಳುತ್ತಿದ್ದಳು. ಪಾರುವಿನ ನಡೆ ಹಾಗೂ ನುಡಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ ಅಖಿಲಾಂಡೇಶ್ವರಿ ಆಕೆಯನ್ನು ತನ್ನ ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದರು.

ಮುಂದೆ ಅರಸನಕೋಟೆಯ ಕುಡಿ ಆದಿತ್ಯ ಹಾಗೂ ಪಾರು ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಖಿಲಾಂಡೇಶ್ವರಿ ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮಾತ್ರವಲ್ಲ ಇದರಿಂದಾಗಿ ಪಾರು ಕೂಡಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತು.

ಇದೀಗ ಪಾರು ಹಾಗೂ ಅದಿತ್ಯನ ಪ್ರೀತಿಯನ್ನು ಅಖಿಲಾಂಡೇಶ್ವರಿ ಒಪ್ಪಿಕೊಂಡಿದ್ದಾಳೆ. ಇದರ ನಡುವೆ ಆದಿತ್ಯನಿಗೆ ಎರಡನೇ ಮದುವೆ ಯೋಗವಿದೆ ಎಂದು ಜ್ಯೋತಿಷ್ಯರು ಹೇಳಿದ್ದಾರೆ. ಮುಂದೆ ಕಥೆ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ.

ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ವಿನಯಾ ಪ್ರಸಾದ್, ಎಸ್. ನಾರಾಯಣ್, ಸಿತಾರಾ, ಅವಿನಾಶ್ , ಮೋಕ್ಷಿತಾ ಪೈ, ಶರತ್, ಪವಿತ್ರಾ ಬಿ ನಾಯಕ್, ಸಿದ್ದು ಮೂಲಿಮನಿ ಅವರು ಅಭಿನಯಿಸುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ