ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಒಲವಿನ ನಿಲ್ದಾಣದಲ್ಲಿ ನಾಯಕ ಸಿದ್ಧಾಂತ್ ಅಣ್ಣ ಆಗಿ ಅಭಿನಯಿಸುತ್ತಿರುವ ಶ್ರೀರಾಮ್ ಮನೋಜ್ಞ ನಟನೆಯ ಮೂಲಕ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಹ್ಯಾಂಡ್ ಸಮ್ ಹುಡುಗ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲಕ ಶ್ರೀರಾಮ್ ಇಂಜಿನಿಯರಿಂಗ್ ಪದವೀಧರರೂ ಹೌದು.

ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ಬೆಸ್ಟ್ ಫ್ರೆಂಡ್ ಜೊತೆಗೆ ಪರ್ಸಲನ್ ಅಸಿಸ್ಟೆಂಟ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಶ್ರೀರಾಮ್ ಪೋಷಕ ಪಾತ್ರಗಳ ಮೂಲಕ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ.

ಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಶ್ಯಾಮಸುಂದರ ಆಗಿ ಅಭಿನಯಿಸಿದ್ದ ಶ್ರೀರಾಮ್ ಅಲ್ಲೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

“ಕಿರುತೆರೆಯ ಜನಪ್ರಿಯ ನಿರ್ದೇಶಕರಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಟಿ.ಎನ್.ಸೀತಾರಾಮ್ ಅವರೊಂದಿಗೆ ಕೆಲಸ ಮಾಡಲು ಸಿಕ್ಕಿರುವುದು ನನ್ನ ಭಾಗ್ಯವೇ ಸರಿ” ಎಂದು ಹೇಳುವ ಶ್ರೀರಾಮ್ ಅವರು “ರಾಧಾ ರಮಣ ಧಾರಾವಾಹಿಯ ಸುಮೇಧನ ಪಾತ್ರದ ಮೂಲಕ ನನ್ನ ಬಣ್ಣದ ಜರ್ನಿ ಶುರುವಾಯಿತು. ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರೂ, ಆ ಪಾತ್ರ ನನಗೆ ಕಜನಪ್ರಿಯತೆ ನೀಡಿತ್ತು. ನಂತರ ಮಗಳು ಜಾನಕಿಯ ಶ್ಯಾಮಸುಂದರನ ಪಾತ್ರಕ್ಕೆ ಜೀವ ತುಂಬಿದೆ. ಮುಂದಿನ ದಿನಗಳಲ್ಲಿ ಜನ ಶ್ಯಾಮಸುಂದರನ ಪಾತ್ರದಿಂದಲೂ ಗುರುತಿಸುವಾಗಲೂ ಕೂಡಾ ತುಂಬಾ ಖುಷಿಯಾಯಿತು” ಎಂದು ಹೇಳಿದ್ದರು.

ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೇಟ್ ಕಾವೇರಿ ಮಗ ಉದಯ್ ಆಗಿ ಕಾಣಿಸಿಕೊಂಡಿರುವ ಶ್ರೀರಾಮ್ ಇದೀಗ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಅದ್ವೈತ್ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇನ್ನು ಇದರ ಜೊತೆಗೆ ಶ್ರೀರಾಮ್ ಅವರು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಕೂಡಾ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ.

ದಿ ಪ್ಲಾನ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಶ್ರೀರಾಮ್ ಮುಂದೆ ದರ್ಪಣ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದರು. ನಂತರ ಗಿಮ್ಮಿಕ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತನಾಗಿ ಕಾಣಿಸಿಕೊಂಡಿರುವ ಶ್ರೀರಾಮ್ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಕೋಸ್ಟಲ್ ವುಡ್ ನಲ್ಲಿಯೂ ಮೋಡಿ ಮಾಡಿದ್ದಾರೆ.

ತುಳುವಿನ ಪೆಟ್ಕಮ್ಮಿ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಕೋಸ್ಟಲ್ ವುಡ್ ನಲ್ಲೂ ಕಮಾಲ್ ಮಾಡಿರುವ ಶ್ರೀರಾಮ್ ಅವರಿಗೆ ನಾಯಕನಿಗಿಂತಲೂ ವಿಲನ್ ಆಗಿ ಕಾಣಿಸಿಕೊಳ್ಳುವ ಮಹಾದಾಸೆ. “ಖಳನಾಯಕನ ಪಾತ್ರಕ್ಕೆ ಜೀವ ತುಂಬಬೇಕು ಎಂಬುದು ಕೇವಲ ನಿನ್ನೆ ಮೊನ್ನೆಯ ಬಯಕೆಯಲ್ಲ. ಮೊದಲಿನಿಂಗದಲೂ ಇದ್ದ ಕನಸು. ಆಕಸ್ಮಿಕವಾಗಿ ನಟನಾ ಜಗತ್ತಿಗೆ ಕಾಲಿಟ್ಟಿರುವ ನಾನು ನಾಯಕನಾಗಬೇಕು ಎಂದು ಎಂದಿಗೂ ಆಸೆ ಪಟ್ಟವನಲ್ಲ. ಬದಲಿಗೆ ಖಳನಾಯಕ ಆಗಬೇಕು ಎಂದು ಕನಸು ಕಂಡವನು. ಬಾಲ್ಯದಿಂದಲೂ ನನ್ನನ್ನು ಆಕರ್ಷಿಸಿದ್ದು ನಾಯಕರಲ್ಲ, ಬದಲಿಗೆ ವಿಲನ್ ಗಳು” ಎನ್ನುತ್ತಾರೆ ಶ್ರೀರಾಮ್.

ಇದರ ಹೊರತಾಗಿ ಖಳನಾಯಕನ ಪಾತ್ರಕ್ಕಾಗಿಯೇ ವಿಶೇಷ ಗಮನ ಹರಿಸಿರುವ ಶ್ರೀರಾಮ್ ಅವರು ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದರು. “ನಾಯಕ ಎಂದ ಮೇಲೆ ಆತ ಒಳ್ಳೆಯವನಾಗಿರಲೇಬೇಕು. ಮುಖ್ಯವಾಗಿ ಅಲ್ಲಿ ಅಭಿನಯಕ್ಕೆ ಅವಕಾಶ ತೀರಾ ಕಡಿಮೆ. ಆದರೆ ಖಳನಾಯಕನ ವಿಚಾರದಲ್ಲಿ ಹಾಗಲ್ಲ. ಅಲ್ಲಿ ಅಭಿನಯಕ್ಕೆ ಅವಕಾಶ ಜಾಸ್ತಿ. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ಬೇಕು ಎಂದರೆ ಅಲ್ಲಿ ಖಳನಾಯಕ ಇರಲೇಬೇಕು” ಎನ್ನುವುದು ಶ್ರೀರಾಮ್ ಅವರ ಅಭಿಪ್ರಾಯ.