ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿಗಿಲಿ ರಿಯಾಲಿಟಿ ಶೋವಿನ ನಿರೂಪಕರಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ನಿರಂಜನ್ ದೇಶಪಾಂಡೆ ನನ್ನಮ್ಮ ಸೂಪರ್ ಸ್ಟಾರ್ ಅಂಥ ಹೇಳುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರ ನಿರೂಪಕರಾಗಿ ನಿರಂಜನ್ ದೇಶಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ.

ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ, ಮಾತಿನಿಂದಲೇ ವೀಕ್ಷಕರನ್ನು ಸೆಳೆಯುವ ನಿರಂಜನ್ ಕಂಪ್ಯೂಟರ್ ಸೈನ್ಸ್ ಪದವೀಧರ ಎನ್ನುವ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಪದವಿಯ ನಂತರ ಕೆಲಸ ಹುಡುಕುತ್ತಿದ್ದ ನಿರಂಜನ್ ಗೆ ರೇಡಿಯೋವೊಂದಕ್ಕೆ ಆಡಿಶನ್ ನೀಡುವ ಅವಕಾಶ ದೊರಕಿತು. ಆಡಿಶನ್ ನೀಡಿ ಬಂದ ನಿರಂಜನ್ ಆಯ್ಕೆಯೂ ಆಗಿದ್ದರು. ತದ ನಂತರ ನಾಲ್ಕು ವರ್ಷಗಳ ಕಾಲ ಆರ್ ಜೆ ಆಗಿ ಕಾಣಿಸಿಕೊಂಡ ನಂತರ ನಟನಾಗಿಯೂ ಮೋಡಿ ಮಾಡಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಲನ ಧಾರಾವಾಹಿಯಲ್ಲಿ ಅಂಜನ್ ಆಗಿ ಅಭಿನಯಿಸಿದ್ದ ನಿರಂಜನ್ ದೇಶಪಾಂಡೆ ಮುಂದೆ ಕಾಣಿಸಿದ್ದು ದೊಡ್ಮನೆಯಲ್ಲಿ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ನಿರಂಜನ್ ಅಲ್ಲಿಯೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು.

ಮಜಾಭಾರತ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ನಿರಂಜನ್ ಮುಂದೆ ತುತ್ತಾಮುತ್ತಾ ಸೀಸನ್ 1 ಮತ್ತು 2, ಸವಾಲಿಗೆ ಸೈ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡರು. ತದ ನಂತರ ಕೊಂಚ ಬ್ರೇಕ್ ಪಡೆದುಕೊಂಡಿದ್ದ ನಿರಂಜನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿಗಿಲಿ ಶೋ ವಿನ ನಿರೂಪಕರಾಗಿ ಮೋಡಿ ಮಾಡಿದ್ದರು. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರ ನಿರೂಪಕರಾಗಿ ಕಾಣಿಸಿಕೊಳ್ಳಲಿರುವ ನಿರಂಜನ್ ಸಿನಿಮಾದಲ್ಲಿಯೂ ನಟಿಸಿದ ಪ್ರತಿಭೆ.

ಚಂದ್ರಮೋಹನ್ ನಿರ್ದೇಶನದ ಬೊಂಬೆ ಮಿಠಾಯಿ ಸಿನಿಮಾದ ಮೂಲಕ ಹಿರಿತೆರೆಯಲ್ಲಿ ನಾಯಕರಾಗಿ ಮಿಂಚಿದ ನಿರಂಜನ್ ರಂಗಭೂಮಿ ಕಲಾವಿದರು ಹೌದು. ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ನಿರಂಜನ್ ಅವರು ಸದ್ಯ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ
