ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಸಿನಿಮಾದಲ್ಲಿ ಚುಕ್ಕಿಯಾಗಿ ನಟಿಸಿದ್ದ ಕೊಡಗಿನ ಕುವರಿ ನಿಧಿ ಸುಬ್ಬಯ್ಯ ತದ ನಂತರ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿರಲಿಲ್ಲ. ಎರಡು ವರ್ಷಗಳ ಕಾಲ ನಟನೆಯಿಂದ ದೂರವಿದ್ದ ನಿಧಿ ಸುಬ್ಬಯ್ಯ ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಹೌದು, ದೂದ್ ಪೇಡಾ ದಿಗಂತ್ ಅಭಿನಯದ “ಎಡಗೈಯೇ ಅಪಘಾತಕ್ಕೆ ಕಾರಣ” ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಮಂಜಿನ ನಗರಿಯ ಚೆಲುವೆ.

ಅಂದ ಹಾಗೇ ಬರೋಬ್ಬರಿ 12 ವರ್ಷಗಳ ನಂತರ ದಿಗಂತ್ – ನಿಧಿ ಸುಬ್ಬಯ್ಯ ಜೊತೆಯಾಗಿ ತೆರೆ ಮೇಲೆ ಬರುತ್ತಿದ್ದಾರೆ. 201ರಲ್ಲಿ ತೆರೆ ಕಂಡ ಪಂಚರಂಗಿ ಸಿನಿಮಾದಲ್ಲಿ ನಿಧಿ ಸುಬ್ಬಯ್ಯ ಅವರು ಅಂಬಿಕಾ ಪಾತ್ರಕ್ಕೆ ಜೀವ ತುಂಬಿದ್ದು ದಿಗಂತ್ ಅವರಿಗೆ ಜೋಡಿಯಾಗಿ ನಟಿಸಿದ್ದರು. ಇದೀಗ ಮತ್ತೆ ದಿಗಂತ್ ಜೊತೆ ನಟಿಸುವ ಅವಕಾಶ ನಿಧಿ ಅವರಿಗೆ ದೊರಕಿದ್ದು ಅವರು ಸಕತ್ ಖುಷಿಯಲ್ಲಿದ್ದಾರೆ.

ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟನ್ನು ಬೆಳೆಸಿಕೊಂಡಿದ್ದ ಕೊಡಗಿನ ಕುವರಿ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಅಭಿಮಾನಿ ಸಿನಿಮಾದ ಅಪರ್ಣಾ ಆಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ ನಿಧಿ ಸುಬ್ಬಯ್ಯ ಮುಂದೆ ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಕೃಷ್ಣ ನೀ ಲೇಟಾಗಿ ಬಾರೋ, ವೀರಬಾಹು, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾಬಾಂಡ್, ನನ್ನ ನಿನ್ನ ಪ್ರೇಮಕಥೆ, 5G, ಆಯುಷ್ಮಾನ್ ಭವ ಸಿನಿಮಾಗಳಲ್ಲಿ ನಟಿಸಿದ್ದರು. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಷ್ಟೇ ಅಭಿನಯಿಸಿದ್ದ ಕೊಡಗಿನ ಕುವರಿ ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯೂ ಆದರು.

ಕನ್ನಡದ ಹೊರತಾಗಿ ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ನಿಧಿ ಸುಬ್ಬಯ್ಯ ಇದೀಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಕೇಳಿ ಸಿನಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ವರ್ಷದ ನಂತರ ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ