ಕನ್ನಡ ಚಿತ್ರರಂಗ ಅಗಾಧವಾಗಿ ಬೆಳೆಯುತ್ತಿದೆ. ಒಂದೆಡೆ ದೊಡ್ಡ ದೊಡ್ಡ ಸಿನಿಮಾಗಳು 100 ಕೋಟಿ ಗಳಿಕೆಯ ಗಡಿ ದಾಟುತ್ತಿದ್ದರೆ, ಇನ್ನೊಂದೆಡೆ ವಿಶೇಷ ಕಥಾಹಂದರ ಹೊಂದಿರುವ ಸಣ್ಣ ಮಟ್ಟದ ಸಿನಿಮಾಗಳು ಸಿನಿರಸಿಕರ ಮನಗೆಲ್ಲುತ್ತಿವೆ. ಇಂತಹ ಚಿತ್ರಗಳಲ್ಲಿ ಇತ್ತೀಚಿಗಷ್ಟೇ ರಾಷ್ಟ್ರಪ್ರಶಸ್ತಿ ಪಡೆದು ಕನ್ನಡಿಗರೆಲ್ಲರೂ ಹೆಮ್ಮೆಪಡಲು ಕಾರಣಾವಾದ ‘ಡೊಳ್ಳು’ ಸಿನಿಮಾ ಕೂಡ ಒಂದು. ಸದ್ಯ ಈ ಸಿನಿಮಾ ಒಟಿಟಿ ಪರದೆಗಳ ಮೂಲಕ ಮನೆಮನೆಗೆ ಬರಲು ಸಜ್ಜಾಗಿದೆ.

‘ಗೂಗ್ಲಿ’, ‘ರಣವಿಕ್ರಮ’, ಹಾಗೂ ‘ನಟಸಾರ್ವಭೌಮ’ದಂತಹ ಹಿಟ್ ಸಿನಿಮಾಗಳನ್ನು ನೀಡಿ ಹಲವಾರು ಸಿನಿಪ್ರೇಮಿಗಳ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಪವನ್ ಒಡೆಯರ್ ಅವರು ನಿರ್ಮಾಣ ಮಾಡಿದ ಮೊದಲ ಸಿನಿಮಾ ‘ಡೊಳ್ಳು’. ಸಾಗರ್ ಪುರಾಣಿಕ್ ಎಂಬ ಯುವ ನಿರ್ದೇಶಕರ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಹಲವು ಅಂತರಾಷ್ಟ್ರೀಯ ಸಿನಿ ಉತ್ಸವಗಳಲ್ಲಿ ‘ಡೊಳ್ಳು’ ಪ್ರದರ್ಶನ ಕಂಡಿತ್ತು.

ದೇಶ ವಿದೇಶಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ ರಾಷ್ಟ್ರಪ್ರಶಸ್ತಿಗೂ ಕೂಡ ಭಾಜನವಾಗಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ನಂತರ ‘ಡೊಳ್ಳು’ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಲು ಸಿಗುತ್ತಿದೆ. ಈ ಮೂಲಕ ಮನೆಯಲ್ಲಿಯೇ ಕೂತು ಈ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾವನ್ನ ನೋಡಬಹುದಾಗಿದೆ.

‘ಡೊಳ್ಳು’ ಸಿನಿಮಾ ನಮ್ಮ ಕನ್ನಡ ನಾಡಿನ ಪ್ರಸಿದ್ಧ ಜಾನಪದ ಕಲೆಗಳಲ್ಲಿ ಒಂದಾಗಿರುವ ಡೊಳ್ಳುಕುಣಿತದ ಸುತ್ತ ಹೆಣೆದಿರುವ ಕಥೆಯಾಗಿದೆ. ಜನರಿಂದ ಜನರಿಗೆ ಹಬ್ಬಿಕೊಂಡು ಬಂದಂತಹ ಸಾಂಪ್ರದಾಯಿಕ ಡೊಳ್ಳುಕುಣಿತ, ಈಗಿನ ಯುವಪೀಳಿಗೆಯ ಜೀವನದಲ್ಲಿ ಎಂತಹ ಪಾತ್ರವಹಿಸುತ್ತದೆ ಎಂದು ಈ ಚಿತ್ರ ತೋರಿಸುತ್ತದೆ. ಕಿರುತೆರೆಯ ಖ್ಯಾತ ನಟ ಕಾರ್ತಿಕ್ ಮಹೇಶ್ ಅವರು ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಮುಂತಾದವರು ನಟಿಸಿದ್ದಾರೆ. ಚಿತ್ರ ಸದ್ಯ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಕಾಣುತ್ತಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ