ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಕೊನೆಯ ಸಿನಿಮಾ ‘ಗಂಧದಗುಡಿ’ ಬೆಳ್ಳಿತೆರೆ ಏರುವ ದಿನಕ್ಕೆ ದಿನಗಣನೆ ಆರಂಭವಾಗಿದೆ. ಅದರ ಸಲುವಾಗಿಯೇ ನಿನ್ನೆ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಅಪ್ಪು ಅವರ ಅತಿದೊಡ್ಡ ಕನಸಾಗಿದ್ದ ಈ ‘ಗಂಧದಗುಡಿ’ ಸಿನಿಮಾವನ್ನ, ಸಿನಿಮಾದಲ್ಲಿನ ಅಪ್ಪು ಅವರನ್ನ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದ ಅಭಿಮಾನಿಗಳು ಈಗ ಬಿಡುಗಡೆಯಾಗಿರುವ ಟ್ರೈಲರ್ ಅನ್ನು ಕೂಡ ಅಷ್ಟೇ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.

ಅಪ್ಪು ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ಭಾಷೆಗಳ ಭೇದಭಾವವಿಲ್ಲದೆ ಹಲವು ಗಣ್ಯವ್ಯಕ್ತಿಗಳು ಸಿನಿಮಾದ ಟ್ರೈಲರ್ ಅನ್ನು ಹಾಗೂ ಅಪ್ಪು ಅವರನ್ನು ಕೊಂಡಾಡಿದ್ದಾರೆ. ಈ ಸಾಲಿಗೆ ನಮ್ಮ ರಾಷ್ಟ್ರದ ಪ್ರಧಾನಮಂತ್ರಿ ಆಗಿರುವ ನರೇಂದ್ರ ಮೋದಿ ಅವರು ಕೂಡ ಸೇರಿದ್ದಾರೆ.

ಹಲವು ಅಭಿಮಾನಿಗಳ ಸಮ್ಮುಖದಲ್ಲಿ, ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಟ್ರೈಲರ್ ಅನ್ನು ಜನರಿಗರ್ಪಿಸಿದ ಅಶ್ವಿನಿ ಅವರು ಇದೇ 28ಕ್ಕೆ ಸಿನಿಮಾವನ್ನ ನೋಡಿ ಹೇಗಿದೆ ಎಂದು ತಿಳಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಈ ಟ್ರೈಲರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅಶ್ವಿನಿ ಅವರು ಪ್ರಧಾನಿ ಮೋದಿ ಹಾಗು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡುತ್ತಾ, “ಅಪ್ಪು ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅವರ ಬದುಕು, ಬದುಕಿನ ಆದರ್ಶ ಎಲ್ಲವೂ ನಮ್ಮೊಂದಿಗಿದೆ. ‘ವಸುಧೈವ ಕುಟುಂಬಕಮ್’ ಎಂಬ ಆದರ್ಶವನ್ನ ಎತ್ತಿ ಹಿಡಿದವರು ಅವರು. ಇಂದು ಅವರ ಕನಸಿನ ‘ಗಂಧದಗುಡಿ’ಯ ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತಿರುವ ನಮಗೆ ಇದು ಭಾವುಕ ದಿನ” ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, “ಅಪ್ಪು ಜಗತ್ತಿನಾದ್ಯಂತ ಹಲವು ಮನಸ್ಸುಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸು ಹಾಗು ಚೈತನ್ಯದ ಪ್ರತೀಕವಾಗಿದ್ದರು. ಅವರ ಕನಸಿನ ‘ಗಂಧದಗುಡಿ’ ಕರ್ನಾಟಕದ ಪ್ರಕೃತಿ ಚೆಲುವಿಗೆ ಸಂದಿದ ಗೌರವದಂತೆ. ಈ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು” ಎಂದು ಮರಳಿ ಟ್ವೀಟ್ ಮಾಡಿದ್ದಾರೆ.

ಜೊತೆಗೆ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು, “ಗಂಧದಗುಡಿ ಅಪ್ಪು ಹೃದಯಕ್ಕೆ ಹತ್ತಿರ, ಅಪ್ಪು ನಮಗೆಲ್ಲರಿಗೂ ಹತ್ತಿರ. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧಗುಡಿಯ ಆಸ್ತಿ. ಗಂಧದಗುಡಿ ಸಿನಿಮಾ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆ ಟ್ರೈಲರ್ ನಲ್ಲಿ ಕಾಣುತ್ತಿದೆ. ಅಭಿನಂದನೆಗಳು” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಅಮೋಘವರ್ಷ ಅವರು ನಿರ್ದೇಶಿಸಿ, ಅಪ್ಪು ಹಾಗೂ ಅಮೋಘ ಅವರೇ ತೆರೆ ಹಂಚಿಕೊಂಡಿರುವ ಈ ‘ಗಂಧದಗುಡಿ’ ಇದೇ ಅಕ್ಟೋಬರ್ 28ರಂದು ತೆರೆಕಾಣುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿರಲಿದ್ದು, ಇದೊಂದು ಡಾಕ್ಯು-ಮೂವಿ ರೀತಿಯ ಸಿನಿಮಾ ಆಗಿರಲಿದೆ. ಈಗಾಗಲೇ ಟ್ರೈಲರ್ ಗೆ ಮೂರು ಮಿಲಿಯನ್ ವೀಕ್ಷಣೆ ದೊರಕಿದ್ದು, ಎಲ್ಲೆಡೆ ಅಭಿಮಾನಿಗಳು ಟ್ರೈಲರ್ ಅನ್ನು ಸಂಭ್ರಮಿಸುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ